ನವದೆಹಲಿ : ಮೊಬೈಲ್ ಸಾಧನಗಳ ಮೂಲಕ ತಕ್ಷಣವೇ ಹಣವನ್ನು ವರ್ಗಾವಣೆ ಮಾಡುವಲ್ಲಿ ಏಕೀಕೃತ ಪಾವತಿಗಳ ಇಂಟರ್ಫೇಸ್ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಾವತಿ ವಿಧಾನವಾಗಿದೆ.
ಇಲ್ಲಿಯವರೆಗೆ ಎಟಿಎಂ ಕಾರ್ಡ್ಗಳನ್ನು ಬಳಸಿ ಎಟಿಎಂನಿಂದ ಹಣವನ್ನು ಪಡೆಯಬಹುದಿತ್ತು. ಇನ್ನು ಮುಂದೆ ಹಣ ವಿತ್ಡ್ರಾ ಮಾಡಲು ಡೆಬಿಟ್ ಕಾರ್ಡ್ ಅಗತ್ಯವಿರುವುದಿಲ್ಲ. ಕೇವಲ ಯುಪಿಐ ಬಳಸಿ ಎಟಿಎಂನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರಾಯ್ತು. ತಕ್ಷಣವೇ ಕ್ಯಾಶ್ ನಿಮ್ಮ ಕೈ ಸೇರುತ್ತದೆ.
ಮಂಗಳವಾರ ಮುಂಬೈನಲ್ಲಿ ನಡೆದ ಗ್ಲೋಬಲ್ ಫಿನ್ಟೆಕ್ ಫೆಸ್ಟ್ನಲ್ಲಿ ಈ ಕಾರ್ಡ್ ಬಳಕೆ ಮಾಡದೆ ಹಣವನ್ನು ತೆಗೆದುಕೊಳ್ಳುವ ಯುಪಿಐ ಎಟಿಎಂ ಅನ್ನು ಮೊದಲ ಬಾರಿಗೆ ಪ್ರದರ್ಶಿಸಲಾಗಿದೆ.
ಭಾರತದ ಮೊದಲ ಯುಪಿಐ ಎಟಿಎಂ ಇದಾಗಿದ್ದು, ಜನರು ಪ್ರತಿ ಬಾರಿ ಎಟಿಎಂ ಹೋದಾಗ ಕಾರ್ಡ್ ಅನ್ನು ಎತ್ತಿಕೊಂಡು ಹೋಗುವ ಅಗತ್ಯವನ್ನು ಕಡಿಮೆ ಮಾಡುತ್ತದೆ. ನೆಟ್ಟಿಗರು ಈ ಹೊಸ ಫೀಚರ್ ಅನ್ನು ಗೇಮ್ ಚೇಂಜರ್ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.