ಪಾಕಿಸ್ತಾನ ಆಕ್ರಮಿತ ಕಾಶ್ಮಿರದಲ್ಲಿ ಸೆಪ್ಟೆಂಬರ್ 29 ರಂದು ಭಾರತೀಯ ಸೇನೆಯ ಸೀಮಿತ ದಾಳಿ ನಡೆಸಿರುವುದನ್ನು ಮತ್ತೊಮ್ಮೆ ತಳ್ಳಿಹಾಕಿದ ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಾಸಿತ್, ಇದೊಂದು ಗಡಿಯಂಚಿನ ಚಕಮಕಿಯಷ್ಟೆ ಎಂದು ಲೇವಡಿ ಮಾಡಿದ್ದಾರೆ.
ಪಾಕಿಸ್ತಾನದ ಗಡಿಯೊಳಗೆ ಸೀಮಿತ ದಾಳಿ ನಡೆದಿಲ್ಲ. ಒಂದು ವೇಳೆ, ಸೀಮಿತ ದಾಳಿ ನಡೆದಿದ್ದರೆ ಪಾಕಿಸ್ತಾನ ಸೇನೆ ತಕ್ಕ ಉತ್ತರ ನೀಡುತ್ತಿತ್ತು. ಭಾರತೀಯ ಸೇನೆ ಗಡಿಯಂಚಿನಲ್ಲಿ ಅಲ್ಪಮಟ್ಟಿನ ಗುಂಡಿನ ಚಕಮಕಿ ಮಾತ್ರ ನಡೆಸಿದೆ ಎಂದು ತಿರುಗೇಟು ನೀಡಿದ್ದಾರೆ.
ಉತ್ತರ ಕಾಶ್ಮಿರದ ಉರಿ ಸೇನಾ ಕೇಂದ್ರದ ಮೇಲೆ ನಡೆದ ಉಗ್ರರ ದಾಳಿಯ ನಂತರ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಏಕಾಂಗಿಯಾಗಿದೆಯೇ ಎನ್ನುವ ಭಾವನೆಯಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಪಾಕಿಸ್ತಾನ ಎಲ್ಲಾ ದೇಶಗಳಿಗಿಂತ ಭಯೋತ್ಪಾದನೆಯ ನೋವು ಅನುಭವಿಸಿದೆ ಎಂದು ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಾಸಿತ್ ಹೇಳಿದ್ದಾರೆ.