ಗುವಾಹಟಿ:ಈಶಾನ್ಯ ಭಾಗದ ಮೂರು ರಾಜ್ಯಗಳಾದ ಅಸ್ಸಾಂ, ಅರುಣಾಚಲಪ್ರದೇಶ, ಮಣಿಪುರಗಳಲಿ ಉಂಟಾದ ನೆರೆ ಪ್ರವಾಹ ಹಾಗೂ ಭೂಕುಸಿತದಿಂದ 58 ಜಿಲ್ಲೆಗಳಿಗೆ ಹಾನಿಯುಂಟಾಗಿದ್ದು, ಸುಮಾರು 80 ಮಂದಿ ಸಾವನ್ನಪ್ಪಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಜನ ಸಂತ್ರಸ್ತರಾಗಿದ್ದಾರೆ.
ಅಸ್ಸಾಂನ ನ 26 ಜಿಲ್ಲೆಗಳಲ್ಲಿ 17 ಲಕ್ಷ ಜನ ಸಂತ್ರಸ್ತರಾಗಿದ್ದು ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 49ಕ್ಕೇರಿದೆ. ಬ್ರಹ್ಮಪುತ್ರ ಸೇರಿದಂತೆ ಇತರ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಹಲವು ಪಟ್ಟಣಗಳು ಜಲಾವೃತಗೊಂಡಿದ್ದು, ಕಟ್ಟಡಗಳು, ಮನೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ.
ಕಾಝಿರಂಗ ರಾಷ್ಟ್ರೀಯ ಉದ್ಯಾನವನದ 70 ಶೇಕಡಾ ಭಾಗ ಜಲಾವೃತ್ತವಾಗಿದೆ. ಹಲವು ಪ್ರಾಣಿಗಳು ಸಾವನ್ನಪ್ಪಿದ್ದು ಕೆಲವು ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿವೆ. ಗೋಲಘಾಟ್, ಲಕ್ಕೀಂಪುರ್, ನಾಗೌನ್‌ನಲ್ಲಿ ಅತೀಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 86,000 ಹೆಕ್ಟೇರ್ ಬೆಳೆ ನೀರಿನಲ್ಲಿ ಮುಳುಗಡೆಯಾಗಿದೆ. ಇನ್ನು ಕೇಂದ್ರ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಈಶಾನ್ಯ ರಾಜ್ಯಗಳ ನೆರೆ ಪರಿಸ್ಥಿತಿಯನ್ನು ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲಿಸಿದ್ದು, ಕೇಂದ್ರದಿಂದ ಎಲ್ಲಾ ರೀತಿ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.