ನವದೆಹಲಿ: ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಳಿಕ ಈಗ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ 18 ವಿಮಾನ ನಿಲ್ದಾಣಗಳು ಬಂದ್ ಆಗಿದ್ದು 200 ವಿಮಾನಗಳು ರದ್ದಾಗಿವೆ.
ವಿಮಾನ ಪ್ರಯಾಣಕ್ಕೆ ಪ್ಲ್ಯಾನ್ ಮಾಡಿಕೊಂಡರೆ ಈ ಸೂಚನೆ ತಪ್ಪದೇ ಗಮನಿಸಿ. ಏರ್ ಸ್ಟ್ರೈಕ್ ಬೆನ್ನಲ್ಲೇ ಭಾರತೀಯ ಸೇನೆ ಶ್ರೀನಗರ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಇದಲ್ಲದೆ ದೇಶದ ಬಹುತೇಕ ವಿಮಾನ ನಿಲ್ದಾಣಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ.
ಶ್ರೀನಗರ ಮಾತ್ರವಲ್ಲದೆ, ಲೇಹ್, ಜಮ್ಮು ಅಮೃತ್ ಸರ್, ಪಠಾಣ್ ಕೋಟ್, ಚಂಢೀಗಡ, ಜೋಧ್ ಪುರ, ಜೈಸಲ್ಮೇರ್, ಶಿಮ್ಲಾ, ಧರ್ಮಶಾಲಾ ಮತ್ತು ಜಾಮ್ ನಗರ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ. ಸುಮಾರು 200 ವಿಮಾನಗಳ ಸೇವೆ ರದ್ದಾಗಿದೆ. ಹೀಗಾಗಿ ಈ ವಿಮಾನ ನಿಲ್ದಾಣಗಳನ್ನು ಬಳಸಿ ಪ್ರಯಾಣ ಮಾಡುವವರು ತಮ್ಮ ಯೋಜನೆ ಬದಲಾಯಿಸಬೇಕಾಗುತ್ತದೆ.
ಏರ್ ಇಂಡಿಯಾ, ಇಂಡಿಗೋ, ಸ್ಪೈಸ್ ಜೆಟ್, ಏರ್ ಇಂಡಿಯಾ ಎಕ್ಸ್ ಪ್ರೆಸ್, ಆಕಾಶ್ ಏರ್ ಮತ್ತು ಕೆಲವು ವಿದೇಶೀ ವಿಮಾನ ಯಾನಗಳ ಸಂಚಾರವೂ ರದ್ದಾಗಿದೆ. ಇನ್ನು ದೇಶದ ಅತಿ ಜನನಿಬಿಡ ವಿಮಾನ ನಿಲ್ದಾಣವಾದ ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಮತ್ತು ತೆರಳುವ 35 ವಿಮಾನಗಳನ್ನು 12 ಗಂಟೆಯಿಂದ ರದ್ದುಗೊಳಿಸಲಾಗಿದೆ. ಈಗಾಗಲೇ ವಿಮಾನ ಬುಕ್ ಮಾಡಿದ್ದವರಿಗೆ ಹಣ ಮರುಪಾವತಿಯಾಗಲಿದೆ.