ನವದೆಹಲಿ: ಭಾರತೀಯ ಸೇನೆಯು ಕಳೆದ ರಾತ್ರಿ ಆಪರೇಷನ್ ಸಿಂಧೂರ್ ಹೆಸರಿನಲ್ಲಿಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ 9 ಉಗ್ರರ ನೆಲೆಗಳನ್ನು ಹೊಡೆದುರುಳಿಸಿದೆ. ಸೇನೆಯ ಸಾಹಸಕ್ಕೆ ದೇಶದಾದ್ಯಂತ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸೇರಿದಂತೆ ಕ್ರಿಕೆಟ್ ತಾರೆಯರು ಕೂಡ ಆಪರೇಷನ್ ಸಿಂಧೂರ್ ಅನ್ನು ಶ್ಲಾಘಿಸಿದ್ದಾರೆ. ಜಗತ್ತಿನಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ. ನಾವೆಲ್ಲರೂ ಒಂದೇ ತಂಡ! ಜೈ ಹಿಂದ್ ಎಂದು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್, ಇರ್ಫಾನ್ ಪಠಾಣ್, ಗೌತಮ್ ಗಂಭೀರ್, ಆಕಾಶ್ ಚೋಪ್ರಾ, ಸುರೇಶ್ ರೈನಾ, ಶಿಖರ್ ಧವನ್ ಮತ್ತಿತರರು ಸಾಮಾಜಿಕ ಮಾಧ್ಯಮದಲ್ಲಿ ಸೇನಾ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ಯಾರಾದರೂ ನಿಮ್ಮ ಮೇಲೆ ಕಲ್ಲು ಎಸೆದರೆ, ಅವರಿಗೆ ಹೂವುಗಳನ್ನು ಎಸೆಯಿರಿ, ಆದರೆ ಕುಂಡದೊಂದಿಗೆ. ಜೈ ಹಿಂದ್ #OperationSindoor, ಎಂತಹ ಸೂಕ್ತ ಹೆಸರು ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಶಿಖರ್ ಧವನ್ ಕೂಡ ಭಾರತೀಯ ಸೇನೆಯನ್ನು ಬೆಂಬಲಿಸಿದ್ದು, ಭಾರತ ಭಯೋತ್ಪಾದನೆಯ ವಿರುದ್ಧ ನಿಲ್ಲುತ್ತದೆ ಎಂದು ಹೇಳಿದ್ದಾರೆ. ಇರ್ಫಾನ್ ಪಠಾಣ್ ಮತ್ತು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೈ ಹಿಂದ್ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.