Operation Sindoor: ಮೊದಲ ಬಾರಿ ಪ್ರತಿಕ್ರಿಯಿಸಿದ ಮೋದಿ, ದೇಶಕ್ಕೆ ಹೆಮ್ಮೆಯ ಕ್ಷಣ ಎಂದ ಪ್ರಧಾನಿ

Sampriya

ಬುಧವಾರ, 7 ಮೇ 2025 (14:33 IST)
ನವದೆಹಲಿ: ಏಪ್ರಿಲ್‌ 22ರಂದು ನಡೆದಿದ್ದ ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಆರಂಭಿಸಿದ ಆಪರೇಷನ್ ಸಿಂಧೂರ್ ಬಗ್ಗೆ ತಮ್ಮ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.

ಕಳೆದ ರಾತ್ರಿ ಭಾರತ ಸೇನೆಯು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ವಿರುದ್ಧ ಆಪರೇಷನ್ ಸಿಂಧೂರ್ ಅಡಿಯಲ್ಲಿ ನಿಖರವಾದ ದಾಳಿ ನಡೆಸಿದೆ. ಪಾಕಿಸ್ತಾನದ 9 ಸ್ಥಳಗಳಲ್ಲಿ ಭಾರತ ದಾಳಿ ಮಾಡಿದ್ದು, ಮುಜಫರಾಬಾದ್, ಮುರ್ಡಿಕೆ, ಕೋಟ್ಲಿಯಲ್ಲಿರುವ ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿಗಳನ್ನು ಹಾರಿಸಿದೆ.

ಸಂಪುಟ ಸಭೆಯಲ್ಲಿ ಮೋದಿ ಪ್ರತಿಕ್ರಿಯಿಸಿ, ಭಾರತದ ಮೂರು ಸೇನೆಗಳನ್ನು ಅಭಿನಂದಿಸಿದ್ದು, ನಮ್ಮ ಸೇನೆ ಅದ್ಭುತ ಕೆಲಸ ಮಾಡಿದ್ದಾರೆ. ಇಡೀ ದೇಶ ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ಯಶಸ್ಸಿನ ಬಗ್ಗೆ ಪ್ರಧಾನಿ ಮೋದಿ ತಮ್ಮ ಸಂಪುಟಕ್ಕೆ ತಿಳಿಸಿದಾಗ ಎಲ್ಲಾ ಸದಸ್ಯರು ಮೇಜು ಬಡಿದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ಮೋದಿಯವರ ಬಲಭಾಗದಲ್ಲಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಎಡಭಾಗದಲ್ಲಿ ಕುಳಿತಿದ್ದಾರೆ. ಸಂಪುಟ ಸಭೆಯ ನಂತರ, ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.

ಗುರುವಾರ ಸರ್ವಪಕ್ಷ ಸಭೆ ಕರೆಯಲು ಸಚಿವ ಸಂಪುಟ ಸಭೆಯಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಭೆಯ ಅಧ್ಯಕ್ಷತೆಯನ್ನು ರಾಜನಾಥ್ ಸಿಂಗ್ ವಹಿಸಲಿದ್ದಾರೆ. ಇದರಲ್ಲಿ ಗೃಹ ಸಚಿವ ಅಮಿತ್ ಶಾ, ಸಚಿವ ಕಿರಣ್‌ ರಿಜಿಜು ಕೂಡ ಭಾಗವಹಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ