ಒನ್ ರ್ಯಾಂಕ್ ಒನ್ ಪೆನ್ಶನ್ ಕುರಿತಂತೆ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಯೋಧ ರಾಮ್ ಕಿಶನ್ ಗರೇವಾಲ್ ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಆರ್‌ಎಂಎಲ್ ಆಸ್ಪತ್ರೆಗೆ ಆಗಮಿಸಿದ್ದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಅಧಿಕಾರಿಗಳು ಭೇಟಿಯಾಗದಂತೆ ತಡೆಯೊಡ್ಡಿದ ಘಟನೆ ವರದಿಯಾಗಿದೆ.
ರಾಹುಲ್ ಗಾಂಧಿ, ಆಸ್ಪತ್ರೆಯ ಒಂದು ದ್ವಾರದಿಂದ ಮತ್ತೊಂದು ದ್ವಾರಕ್ಕೆ ತೆರಳಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯೊಳಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿರುವುದು ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
ಆಸ್ಪತ್ರೆ ಒಳಗಡೆ ಬಿಡದಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಮೋದಿ ಸರಕಾರ ದೇಶದಲ್ಲಿ ಎಂತಹ ವಾತಾವರಣ ಸೃಷ್ಟಿಸಿದೆ. ದೇಶದ ಇತಿಹಾಸದಲ್ಲಿಯೇ ನಮ್ಮ ಸೈನಿಕರ ಕುಟುಂಬಗಳನ್ನು ಭೇಟಿ ಮಾಡಲು ನಮಗೇ ಅವಕಾಶ ಕೊಡುತ್ತಿಲ್ಲ ಎಂದು ಗುಡುಗಿದರು.
ಆಸ್ಪತ್ರೆಯ ಪರಿಸ್ಥಿತಿ ಕುರಿತಂತೆ ಸುದ್ದಿಗಾರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಇದೊಂದು ಮೋದಿ ಸರಕಾರದ ಮಾನಸಿಕ ಅಸ್ವಸ್ಥತೆ ಮತ್ತು ಪ್ರಜಾಪ್ರಭುತ್ವದ ಮಾನಸಿಕ ಅಸ್ವಸ್ಥತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ನನಗೆ ಆಸ್ಪತ್ರೆಯೊಳಗೆ ಪ್ರವೇಶಿಸಲು ಅನುಮತಿ ನೀಡದಿದ್ದರೂ ಪರವಾಗಿಲ್ಲ. ಯೋಧನ ಕುಟುಂಬದವರು ನನ್ನನ್ನು ಹೊರಗಡೆ ಭೇಟಿ ಮಾಡಲು ಅನುಮತಿ ಕೋರಿದರು. ಆದರೆ, ರಾಹುಲ್ ಭೇಟಿಗೆ ಬಂದ ಮೃತ ಯೋಧನ ಕುಟುಂಬದವರನ್ನು ಅಧಿಕಾರಿಗಳು ತಡೆದರು ಎನ್ನಲಾಗಿದೆ.
ಹುತಾತ್ಮ ಯೋಧನ ಕುಟುಂಬದವರನ್ನು ಬಂಧಿಸಲಾಗಿದೆ. ಮೋದಿ ಸರಕಾರ ಲಜ್ಜಗೇಡಿ ಸರಕಾರವಾಗಿದೆ ಎಂದು ಕಿಡಿಕಾರಿ ರಾಹುಲ್ ಗಾಂಧಿ ಆಸ್ಪತ್ರೆಯಿಂದ ತೆರಳಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇದಕ್ಕಿಂತ ಮೊದಲು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಯೋಧನ ಕುಟುಂಬದವರನ್ನು ಭೇಟಿ ಮಾಡಲು ತೆರಳಿದ್ದಾಗ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ