ಅಯೋಧ್ಯೆ: ನಿನ್ನೆಯಷ್ಟೇ ಲೋಕಾರ್ಪಣೆಗೊಂಡ ಅಯೋಧ್ಯೆಯ ರಾಮ ಮಂದಿರ ಇಂದಿನಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ.
ನಿನ್ನೆ ಪ್ರಧಾನಿ ಮೋದಿ ಪೂಜಾ ವಿಧಿ ವಿಧಾನಗಳನ್ನು ಯಜಮಾನನ ಸ್ಥಾನದಲ್ಲಿ ಕುಳಿತು ನೆರವೇರಿಸಿದರು. ಈ ವೇಳೆ ಸಾವಿರಾರು ಮಂದಿ ಗಣ್ಯರು ಭಾಗಿಯಾಗಿದ್ದರು. ಆದರೆ ನಿನ್ನೆಯ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ.
ಆದರೆ ಲೋಕಾರ್ಪಣೆಯಾದ ಮರುದಿನದಿಂದಲೇ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ರಾಮಜನ್ಮಭೂಮಿ ಟ್ರಸ್ಟ್ ಹೇಳಿತ್ತು. ಅದರಂತೆ ಇಂದು ಬೆಳಗ್ಗಿನ ಜಾವದಿಂದಲೇ ರಾಮಲಲ್ಲಾನ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ.
ಬೆಳಿಗ್ಗೆ 3 ಗಂಟೆಯಿಂದಲೇ ದೇವರ ದರ್ಶನಕ್ಕಾಗಿ ಭಕ್ತರು ಕ್ಯೂ ನಿಂತಿದ್ದರು. 6.30 ಕ್ಕೆ ಶೃಂಗಾರ ಆರತಿಗಾಗಿ ಮುಚ್ಚಿದ್ದ ದೇವಾಲಯದ ಬಾಗಿಲನ್ನು ತೆರೆಯಲಾಯಿತು. ಈ ವೇಳೆ ಜನರು ರಾಮಲಲ್ಲಾನ ದರ್ಶನ ಪಡೆಯಲು ನೂಕು ನುಗ್ಗಲು ನಡೆಸಿದರು. ಮೊದಲ ದಿನವೇ ರಾಮಲಲ್ಲಾನ ದರ್ಶನಕ್ಕೆ ಅದ್ಭುತ ಪ್ರತಿಕ್ರಿಯೆ ಕಂಡುಬಂದಿದೆ.