ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣ: ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ

Krishnaveni K

ಶುಕ್ರವಾರ, 15 ಆಗಸ್ಟ್ 2025 (09:00 IST)
Photo Credit: X
ನವದೆಹಲಿ: 79 ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಇಂದು ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಅಣ್ವಸ್ತ್ರ ಬೆದರಿಕೆ ಹಾಕುತ್ತಿರುವ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಆಪರೇಷನ್ ಸಿಂಧೂರ್, ಆತ್ಮನಿರ್ಭರತೆ ಬಗ್ಗೆ ವಿಶೇಷವಾಗಿ ಮಾತನಾಡಿದ್ದಾರೆ. ಆಪರೇಷನ್ ಸಿಂಧೂರ್ ನಲ್ಲಿ ಭಾಗಿಯಾದ ಸೈನಿಕರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಸಿಂಧೂರ ಅಳಿಸಲು ಬಂದ ಉಗ್ರರಿಗೆ ತಕ್ಕ ಪಾಠ ಕಲಿಸಿದ್ದಾಗಿ ಹೇಳಿದ್ದಾರೆ.

ಇನ್ನು, ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆಗೆಲ್ಲಾ ನಾವು ಜಗ್ಗಲ್ಲ ಎಂದಿದ್ದಾರೆ. ಮೊನ್ನೆಯಷ್ಟೇ ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಫ್ ಮುನೀರ್ ಭಾರತದ ವಿರುದ್ಧ ಅಣ್ವಸ್ತ್ರ ಬಳಕೆ ಮಾಡುವ ಬೆದರಿಕೆ ಹಾಕಿದ್ದರು. ಇದಕ್ಕೆ ಇಂದು ತಿರುಗೇಟು ನೀಡಿರುವ ಪ್ರಧಾನಿ ಮೋದಿ ಇಂತಹ ಬೆದರಿಕೆಗಳಿಗೆ ತಕ್ಕ ಉತ್ತರ ನೀಡಲು ನಮ್ಮ ಸೇನೆ ಸನ್ನದ್ಧವಾಗಿದೆ. ನಮ್ಮ ಸೇನೆಗೆ ಯಾವ ಕ್ಷಣದಲ್ಲಿ, ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ದಾಳಿ ಮಾಡಲು ಅಧಿಕಾರ ನೀಡಲಾಗಿದೆ. ಇಂತಹ ಬೆದರಿಕೆಗಳೆಲ್ಲಾ ನಮ್ಮ ಮುಂದೆ ನಡೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ತಮ್ಮ ಭಾಷಣದಲ್ಲಿ ಆತ್ಮನಿರ್ಭರ ಭಾರತದ ಬಗ್ಗೆ ಮೋದಿ ವಿಶೇಷವಾಗಿ ಮಾತನಾಡಿದ್ದಾರೆ. ನಮ್ಮ ವಸ್ತುಗಳನ್ನು ನಾವೇ ಉತ್ಪಾದನೆ ಮಾಡುವಷ್ಟು, ಕಡಿಮೆ ದರದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವಷ್ಟು ನಾವು ಸಮರ್ಥರಾಗಬೇಕು ಎಂದು ಯುವ ಜನತೆಗೆ ಕರೆ ನೀಡಿದ್ದಾರೆ.

ರೈತರಿಗೆ ಯಾವುದೇ ಸಮಸ್ಯೆ ಬಂದರೂ ಗೋಡೆಯಂತೆ ನಾನಿದ್ದೇನೆ ಎಂದು ಅಭಯ ನೀಡಿದ್ದಾರೆ. ಯಾವುದೇ ರಾಜಕೀಯ ಪಕ್ಷ ಬೇಧವಿಲ್ಲದೇ ನಮ್ಮ ದೇಶವನ್ನು ಅಭಿವೃದ್ಧಿಯತ್ತ ಮುಂದೆ ತರಬೇಕು ಎಂಬುದೇ ನಮ್ಮೆಲ್ಲರ ಗುರಿಯಾಗಿರಲಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ