ನವದೆಹಲಿ: ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪಕ್ಷದ ಸಾಗರೋತ್ತರ ನಾಯಕ ಸ್ಯಾಮ್ ಪಿತ್ರೋಡಾ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಈಗ ಪಕ್ಷಕ್ಕೆ ಮುಳುವಾಗಿದೆ.
ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ಆಸ್ತಿ ಹಕ್ಕು ಬದಲಾವಣೆ ಮಾಡುವುದಾಗಿ ಹೇಳಿದೆ. ಆದರೆ ಇದರ ಬೆನ್ನಲ್ಲೇ ಸ್ಯಾಮ್ ಪಿತ್ರೋಡಾ ಅಮೆರಿಕಾದಲ್ಲಿ ಸಂದರ್ಶನವೊಂದರಲ್ಲಿ ಪಿತ್ರಾರ್ಜಿತ ಆಸ್ತಿ ಹಕ್ಕು ಮತ್ತು ಭಾರತದಲ್ಲಿ ಇದನ್ನು ಅಳವಡಿಸಬೇಕಾದ ಅನವಾರ್ಯತೆ ಬಗ್ಗೆ ವಿವರಣೆ ನೀಡಿದ್ದಾರೆ.
ಅದರಂತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬ್ಬ ವ್ಯಕ್ತಿಯ ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.55 ರಷ್ಟು ಸರ್ಕಾರಕ್ಕೆ ಮತ್ತು ಉಳಿದ ಶೇ.45 ರಷ್ಟು ಮಾತ್ರ ಮಕ್ಕಳಿಗೆ ಸಿಗಬೇಕು. ಸರ್ಕಾರ ಶೇ.55 ರಷ್ಟು ಆಸ್ತಿ ವಶಕ್ಕೆ ಪಡೆದು ಬಡವರಿಗೆ ಹಂಚಬೇಕು. ಆ ಮೂಲಕ ಸಾಮಾಜಿಕ ನ್ಯಾಯ ಕೊಡಿಸಬೇಕು. ಇಂತಹದ್ದೊಂದು ಕಾನೂನು ಭಾರತದಲ್ಲೂ ಜಾರಿಗೆ ಬರಬೇಕು ಎಂದು ಪ್ರತಿಪಾದಿಸಿದ್ದರು. ಅವರ ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ನಾವು ಕಷ್ಟಪಟ್ಟು ಗಳಿಸಿದ ಆಸ್ತಿಯ ಅರ್ಧಭಾಗ ಸರ್ಕಾರಕ್ಕೆ ಕೊಡುವಂತಾದರೆ ಮಧ‍್ಯಮ ವರ್ಗದವರು, ಕಷ್ಟಪಟ್ಟು ಆಸ್ತಿ ಗಳಿಸಿದವರಿಗೆ ಅನ್ಯಾಯವಾದಂತಾಗುತ್ತದೆ ಎಂದು ಈಗಾಗಲೇ ಟೀಕೆ ಕೇಳಿಬಂದಿದೆ. ಇದೀಗ ಕಾಂಗ್ರೆಸ್ ಪಕ್ಷಕ್ಕೇ ಮುಜುಗರ ತಂದಿದೆ. ಈ ಹೇಳಿಕೆ ಪಕ್ಷಕ್ಕೆ ಚುನಾವಣೆಯಲ್ಲಿ ಡ್ಯಾಮೇಜ್ ಉಂಟು ಮಾಡಬಹುದು. ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಸಮರ್ಥನೆ ನೀಡುತ್ತಿದ್ದು, ಇದು ಪಿತ್ರೋಡಾ ಅವರ ವೈಯಕ್ತಿಕ ಅಭಿಪ್ರಾಯವಷ್ಟೇ. ಕಾಂಗ್ರೆಸ್ 55 ವರ್ಷ ಆಳ್ವಿಕೆ ಮಾಡಿದೆ. ಇಷ್ಟು ವರ್ಷಗಳಲ್ಲಿ ಇಂತಹದ್ದೇನಾದರೂ ಮಾಡಿದ್ದೀವಾ. ಇಂತಹ ಉದ್ದೇಶ ನಮಗಿಲ್ಲ ಎಂದಿದ್ದಾರೆ. ಜೊತೆಗೆ ಮೋದಿ ಜನಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.
ಆದರೆ ಇದೇ ವಿಚಾರವಾಗಿ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಕಾಂಗ್ರೆಸ್ ಗೆ ತಿರುಗೇಟು ಕೊಟ್ಟಿದ್ದಾರೆ. ಕಾಂಗ್ರೆಸ್ ಯುವರಾಜನ ಸಲಹೆಗಾರ ಮಧ‍್ಯಮ ವರ್ಗದವರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಬಗ್ಗೆ ಮೊದಲೇ ಹೇಳಿದ್ದಾರೆ. ಇದೀಗ ಕಾಂಗ್ರೆಸ್ ನೀವು ಪಿತ್ರಾರ್ಜಿತವಾಗಿ ಪಡೆದ ಆಸ್ತಿಯನ್ನು ನಿಮ್ಮಿಂದ ಕಿತ್ತುಕೊಳ್ಳುವ ತೆರಿಗೆ ಬಗ್ಗೆ ಹೇಳುತ್ತಿದೆ. ನೀವು ಕಷ್ಟಪಟ್ಟು ಗಳಿಸಿದ ಆಸ್ತಿ ನಿಮ್ಮ ಮಕ್ಕಳಿಗೇ ಸಿಗಲ್ಲ. ಈ ಆಸ್ತಿಯನ್ನು ಕಾಂಗ್ರೆಸ್ ಕಬಳಿಸಲಿದೆ ಎಂದಿದ್ದಾರೆ.
ಅತ್ತ ಗೃಹಸಚಿವ ಅಮಿತ್ ಶಾ ಕೂಡಾ ಟೀಕೆ ಮಾಡಿದ್ದಾರೆ. ಈ ಹೇಳಿಕೆ ಮೂಲಕ ಕಾಂಗ್ರೆಸ್ ತನ್ನ ಬಣ್ಣ ಬಯಲು ಮಾಡಿಕೊಂಡಿದೆ. ಈ ಹಿಂದೆ ಇದೇ ಕಾಂಗ್ರೆಸ್ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಸಂಪತ್ತಿನ ಮೊದಲ ಅಧಿಕಾರ ಅಲ್ಪಸಂಖ್ಯಾತರಿಗೆ ಎಂದಿದ್ದರು. ಇದೀಗ ಸ್ಯಾಮ್ ಪಿತ್ರೋಡಾ ಹೇಳಿಕೆ ಗಮನಿಸಿದರೆ ನೀವು ಗಳಿಸಿದ ಆಸ್ತಿ ಶೇ.55 ರಷ್ಟು ಸರ್ಕಾರದ ಪಾಲಾಗಲಿದೆ. ಮೋದಿಜೀ ಈ ಬಗ್ಗೆ ಜನರಿಗೆ ಹೇಳಿದಾಗ ರಾಹುಲ್ ಗಾಂಧಿ, ಖರ್ಗೆ, ಸೋನಿಯಾ ಗಾಂಧಿ ಮತ್ತು ಇತರೆ ಕಾಂಗ್ರೆಸ್ ನಾಯಕರು ಇದು ವಿವಾದವಾಗುತ್ತಿದ್ದಂತೇ ನಾವು ಹಾಗೆ ಹೇಳೇ ಇಲ್ಲ ಎಂದು ಹಿಂದೆ ಸರಿಯುತ್ತಿದ್ದಾರೆ. ಆದರೆ ಇಂದು ಸ್ಯಾಮ್ ಪಿತ್ರೋಡಾ ಹೇಳಿಕೆ ದೇಶದ ಮುಂದೆ ಕಾಂಗ್ರೆಸ್ ಉದ್ದೇಶ ಬಯಲಾಗಿದೆ ಎಂದಿದ್ದಾರೆ.