ನವದೆಹಲಿ: ಪೆಹಲ್ಗಾಮ್ ನಲ್ಲಿ ಉಗ್ರರು ಪೈಶಾಚಿಕ ಕೃತ್ಯ ನಡೆಸಿ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನಲೆಯಲ್ಲಿ ಪೆಹಲ್ಗಾಮ್ ದಾಳಿ ಸಂತ್ರಸ್ತರಿಗೆ ನಮನ ಸಲ್ಲಿಸಿರುವ ಪ್ರಧಾನಿ ಮೋದಿ ಈ ಕೃತ್ಯವನ್ನು ಯಾವತ್ತೂ ನಾವು ಮರೆಯಲ್ಲ ಎಂದು ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಏಪ್ರಿಲ್ 22, 2025 ರಂದು ಇದೇ ದಿನ ಬೈಸರಣ್ ವ್ಯಾಲಿಯಲ್ಲಿ ತಮ್ಮ ಕುಟುಂಬದವರ ಜೊತೆ ಸಂತೋಷದಿಂದ ಕಾಲ ಕಳೆಯುತ್ತಿದ್ದ ಭಾರತೀಯ ನಾಗರಿಕರ ಮೇಲೆ ಪಾಕ್ ಪ್ರೇರಿತ ಉಗ್ರರು ನೀನು ಹಿಂದೂನಾ, ಮುಸ್ಲಿಮಾ ಎಂದು ಧರ್ಮ ಕೇಳಿ ಕುಟುಂಬದವರ ಮುಂದೆಯೇ ಪುರುಷರನ್ನು ಗುಂಡಿಕ್ಕಿ ಕೊಂದಿದ್ದರು. ಘಟನೆಯಲ್ಲಿ 26 ಮಂದಿ ಸಾವನ್ನಪ್ಪಿದ್ದರು.
ಈ ಘಟನೆ ಬಳಿಕ ಭಾರತೀಯ ಸೇನೆ ಆಪರೇಷನ್ ಸಿಂಧೂರ್, ಆಪರೇಷನ್ ಮಹದೇವ ನಡೆಸಿ ಉಗ್ರರ ಸಂಹಾರ ನಡೆಸಿತ್ತು. ಭಾರತಕ್ಕೆ ಉಗ್ರರನ್ನು ಛೂ ಬಿಡುತ್ತಿದ್ದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿತ್ತು. ಈ ಘಟನೆ ಬಗ್ಗೆ ಇಂದು ಪ್ರಧಾನಿ ಮೋದಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪೆಹಲ್ಗಾಮ್ ನಲ್ಲಿ ನಡೆದಿದ್ದ ಉಗ್ರರ ಪೈಶಾಚಿಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರನ್ನು ಈ ದಿನ ನೆನಪಿಸಿಕೊಳ್ಳುತ್ತಿದ್ದೇನೆ. ಅವರು ಯಾವತ್ತೂ ಮರೆತು ಹೋಗಲಾರರು. ಅವರ ಕುಟುಂಬಸ್ಥರ ಜೊತೆಗೆ ನಾನು ಎಂದೆಂದಿಗೂ ಇರುತ್ತೇನೆ. ದೇಶವಾಗಿ ಈ ದುಃಖದಲ್ಲಿ ನಾವು ಜೊತೆಯಾಗಿ ನಿಲ್ಲುತ್ತೇವೆ. ಉಗ್ರರ ಯಾವುದೇ ಕೃತ್ಯವನ್ನು ಯಶಸ್ವಿಯಾಗಲು ನಾವು ಬಿಡಲ್ಲ ಎಂದು ಮೋದಿ ಹೇಳಿದ್ದಾರೆ.