ಏಕತಾ ಪ್ರತಿಮೆ ಅನಾವರಣಗೊಳಿಸಿ ಪ್ರಧಾನಿ ಮೋದಿ ಹೇಳಿದ್ದೇನು?
ಬುಧವಾರ, 31 ಅಕ್ಟೋಬರ್ 2018 (11:23 IST)
ನರ್ಮದಾ: ಗುಜರಾತ್ ನ ನರ್ಮದಾದಲ್ಲಿ ಸ್ವತಂತ್ರ ಭಾರತದ ಶಿಲ್ಪಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಅನಾವರಣಗೊಳಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
ತುಂಡು, ತುಂಡಾಗಿ ವಿಭಜನೆಯಾಗಿದ್ದ ಭಾರತವನ್ನು ಒಗ್ಗೂಡಿಸಿದ ಈ ಮಹಾನ್ ನಾಯಕನನ್ನು ನಾವು ಯಾವತ್ತೂ ಮರೆಯಬಾರದು. ದೇಶವನ್ನು ವಿಭಜಿಸುವ ಪ್ರಯತ್ನವನ್ನು ವಿಫಲಗೊಳಿಸಿದವರು. ಈ ಐತಿಹಾಸಿಕ ಕ್ಷಣಕ್ಕೆ ದೇಶದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
ಪ್ರತಿಮೆ ಅನಾವರಣಗೊಳಿಸದ ಬಳಿಕ ದೇಶದ ಏಕತೆಗೆ ಜಿಂದಾಬಾದ್, ಸರ್ದಾರ್ ಪಟೇಲ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಧಾನಿ ಮೋದಿ, ‘ನಾನು ಈ ಯೋಜನೆಯನ್ನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಮಾಡಬೇಕೆಂದಿದ್ದೆ. ಆದರೆ ಪ್ರಧಾನಿಯಾಗಿ ಪೂರ್ಣಗೊಳಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ತಾಯಿ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದರೆ ಪುತ್ರನ ತಾಕತ್ತು ಹೆಚ್ಚುತ್ತದೆ. ಹಾಗೆಯೇ ನನಗೆ ನರ್ಮದಾ ತಾಯಿಯ ಆಶೀರ್ವಾದ ಸಿಕ್ಕಿದೆ’ ಎಂದಿದ್ದಾರೆ.
ಅಲ್ಲದೆ ಈ ದಿನವನ್ನು ದೇಶ ಯಾವತ್ತೂ ಮರೆಯಲಾಗದು. ದೇಶದಾದ್ಯಂತ ಇಂದು ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಇಂದಿನ ಏಕತಾ ದಿನ ಆಚರಿಸುತ್ತಿರುವ ಎಲ್ಲರಿಗೂ ನಾನು ಗೌರವ ಸಲ್ಲಿಸುತ್ತೇನೆ ಎಂದರು.
ಅಂದು ಸರ್ದಾರರು ದೇಶವನ್ನು ಒಗ್ಗೂಡಿಸದೇ ಇದ್ದಿದ್ದರೆ ಇಂದು ಹೈದರಾಬಾದ್ ನ ಚಾರ್ ಮೀನಾರ್ ನೋಡಲು ಗುಜರಾತ್ ನ ಸೋಮನಾಥನ ದರ್ಶನ ಪಡೆಯಲು ವೀಸಾ ಪಡೆಯಬೇಕಿತ್ತು. ಆದರೆ ಸರ್ದಾರರ ಹೋರಾಟದಿಂದ, ಶ್ರಮದಿಂದ ಈ ದೇಶ ಒಂದೇ ದೇಶವಾಗಿ ರೂಪುಗೊಂಡಿತು. ಈ ಪ್ರತಿಮೆ ಅವರ ಪರಿಶ್ರಮದ, ತ್ಯಾಗದ ಸಂಕೇತ. ಇದು ನವಭಾರತದ, ಭಾರತದ ಅಸ್ಥಿತ್ವವನ್ನು ಪ್ರಶ್ನಿಸುವವರಿಗೆ ಉತ್ತರ ನೀಡುವ, ರೈತರ ಸ್ವಾಭಿಮಾನದ ಪ್ರತೀಕ ಎಂದು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.