ಪೆಟ್ರೋಲ್ ದರ ಇಳಿಸಿ: ರಾಜ್ಯಗಳಿಗೆ ಪ್ರಧಾನಿ ಸಲಹೆ
ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಬೇಕು. ಈ ಮೂಲಕ ದೇಶದಲ್ಲಿ ಹೆಚ್ಚುತ್ತಿರುವ ಆಹಾರ ಧಾನ್ಯಗಳ ಬೆಲೆ ಏರಿಕೆ ನಿಯಂತ್ರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಕೊರೊನಾ ವೈರಸ್ ನಾಲ್ಕನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ಸಿಎಂಗಳ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಕಳೆದ ನವೆಂಬರ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಕಡಿತಗೊಳಿಸಿತ್ತು. ಅಲ್ಲದೇ ರಾಜ್ಯಗಳು ಸಹ ಬೆಲೆ ಕಡಿಮೆ ಮಾಡಬೇಕು ಎಂದು ಮನವಿ ಮಾಡಿತ್ತು ಎಂದರು.
ಕೇಂದ್ರ ಸರಕಾರದ ಸಲಹೆ ಮೇರೆಗೆ ಕೆಲವು ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸಿತ್ತು. ಆದರೆ ಪಶ್ಚಿಮ ಬಂಗಾಳ, ಕೇರಳ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಕಡಿತ ಮಾಡಲಿಲ್ಲ ಎಂದು ಪರೋಕ್ಷವಾಗಿ ಬಿಜೆಪಿಯೇತರ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಲವು ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆ ಇಳಿಸದೇ ಇರುವುದರಿಂದ ತಮ್ಮದೇ ರಾಜ್ಯದ ಜನತೆಗೆ ಬೆಲೆ ಕಡಿತದ ಲಾಭ ದೊರೆಯದಂತೆ ಮಾಡಿವೆ. ಇದರಿಂದ ಬೆಲೆ ಇಳಿಸಿದ ರಾಜ್ಯಗಳಿಗೆ ವಲಸೆ ಹೋಗುವಂತೆ ಆಗಿದೆ. ಇದರಿಂದ ಅಕ್ಕಪಕ್ಕದ ರಾಜ್ಯಗಳಿಗೆ ತೈಲ ಪೂರೈಕೆಯಲ್ಲಿ ತೊಂದರೆ ಆಗುತ್ತಿದೆ ಎಂದು ಅವರು ವಿವರಿಸಿದರು.