ಯಾಸಿನ್ ಭಟ್ಕಳ್ ದೂರವಾಣಿ ಸಂಭಾಷಣೆಗೆ ಬೆಚ್ಚಿಬಿದ್ದ ಪೊಲೀಸರು...?!

ಶನಿವಾರ, 4 ಜುಲೈ 2015 (13:26 IST)
ರಾಷ್ಟ್ರದ ಹಲವೆಡೆ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿದ್ದ ಆರೋಪದ ಮೇಲೆ ಬಂಧಿತನಾಗಿರುವ ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ, ಬಂಧಿತ ಆರೋಪಿ ಉಗ್ರ, ಯಾಸಿನ್ ಭಟ್ಕಳ್‌ನ ದೂರವಾಣಿ ಸಂಭಾಷಣೆ ರಾಷ್ಟ್ರದ ಪೊಲೀಸ್ ಭದ್ರತೆಯನ್ನೇ ಬೆಚ್ಚಿಬೀಳಿಸಿದ್ದು, ಈ ಹಿನ್ನೆಲೆಯಲ್ಲಿ ಆತನಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. 
 
ಏನಿದು ಪ್ರಕರಣ?: 
ಎಲ್ಲಾ ಖೈದಿಗಳಂತೆ ಯಾಸಿನ್ ಭಟ್ಕಳ್‌ಗೂ ಕೂಡ ವಾರಕ್ಕೆ ಎರಡು ಬಾರಿ ಸಂಬಂಧಿಗರೊಂದಿಗೆ ಮಾತನಾಡಲು ದೂರವಾಣಿಯೊಂದಿಗೆ ಅವಕಾಶ ನೀಡಲಾಗಿತ್ತು. ಈ ವೇಳೆ, ತನ್ನ ಪತ್ನಿ ಜಹೀದಾ ಅವರೊಂದಿಗೆ ಮಾತನಾಡಿರುವ ಭಟ್ಕಳ್, ನಾನು ಶೀಘ್ರದಲ್ಲಿಯೇ ಹೊರ ಬರುತ್ತೇನೆ. ಇಬ್ಬರೂ ಸೇರಿ ಹೊರ ರಾಷ್ಟ್ರಕ್ಕೆ ತೆರಳಿ ಡಮಾಸ್ಕಸ್‌ನಲ್ಲಿ ತಂಗೋಣ ಎಂದಿರುವ ಆತ, ನಾನು ಹೊರ ಬರಲು ಐಎಸ್‌ಐಎಸ್ ಉಗ್ರರು ಸಹಾಯ ಮಾಡುತ್ತಿದ್ದಾರೆ ಎಂದು ವಿಷಯವನ್ನು ತಿಳಿಸಿದ್ದಾನೆ. 
 
ಭಟ್ಕಳ್‌ನ ಈ ಎಲ್ಲಾ ಸಂಭಾಷಣೆಯನ್ನು ಪೊಲೀಸರು ರೆಕಾರ್ಡ್ ಮಾಡಿಕೊಂಡಿದ್ದು, ಸುಮಾರು 10 ಬಾರಿ ತನ್ನ ಪತ್ನಿಗೆ ಕರೆ ಮಾಡಿದ್ದಾನೆ. ಅಲ್ಲದೆ ಅಷ್ಟೂ ಬಾರಿಯೂ ಕೂಡ ತನ್ನ ಪತ್ನಿಗೆ ಹೊರ ಬರುತ್ತೇನೆ ಎಂಬ ಭರವಸೆಯ ಹೇಳಿಕೆಗಳನ್ನು ನೀಡಿದ್ದಾನೆ ಎಂಬುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. 
 
ಯಾಸಿನ್ ಭಟ್ಕಳ್ ಪ್ರಸ್ತುತ ಹೈದರಾಬಾದ್‌ನ ಚೆರ್ಲಾಪಲ್ಲಿ ಜೈಲಿನಲ್ಲಿದ್ದು, ಆತನನ್ನು ಇದೇ ಕಾರಣ ಹಿನ್ನೆಲೆಯಲ್ಲಿ ಅಜ್ಞಾತ ಸ್ಥಳದಲ್ಲಿಡಲು ಪೊಲೀಸ್ ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಲುವಾಗಿಯೇ ಡಿಐಜಿ ನರಸಿಂಹ ಅವರು ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ಕರೆಯಲಿದ್ದು, ಈ ಸಂಬಂಧ ಮಾಹಿತಿ ನೀಡಲಿದ್ದಾರೆ. 
 
ಭಟ್ಕಳ್, ಬೆಂಗಳೂರು, ಪುಣೆ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ಹಲವು ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕಾರಣ ಕಾರ್ಯಾಚರಣೆ ಆರಂಭಿಸಿದ್ದ ರಾಷ್ಟ್ರೀಯ ತನಿಖಾ ದಳದ(ಎಸ್‌ಐಎ) ಪೊಲೀಸರು, ಭಾರತ-ನೇಪಾಳ ಗಡಿಯಲ್ಲಿ 2013ರ ಆಗಸ್ಟ್ 23ರಂದು ಬಂಧಿಸಿದ್ದರು. 

ವೆಬ್ದುನಿಯಾವನ್ನು ಓದಿ