ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಪರ ತನಿಖೆಗೆ ಮೊದಲೆ ಕ್ಲೀನ್ ಚಿಟ್ ಹೇಳಿಕೆ ಸಂಬಂಧ ಯುಟಿ ಖಾದರ್ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಯುಟಿ ಖಾದರ್ ಅವರಿಗೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಯಾಕಷ್ಟು ಕಾಳಜಿ. ಈ ಪ್ರಕರಣದಲ್ಲಿ ಹೇಳಿಕೆ ನೀಡಲು ಅವರೇನು ಉಸ್ತುವಾರಿ ಸಚಿವರೆ ಎಂದು ಪ್ರಶ್ನೆ ಮಾಡಿದರು.
ಖಾದರ್ ಅವರದ್ದು ಒನ್ಸೈಡ್ ವರ್ತನೆ. ಅವರು ಸ್ಪೀಕರ್ ಆಗಿರುವ ತನಕ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ನ್ಯಾಯ ಸಿಗುವ ನಂಬಿಕೆ ಇಲ್ಲ. ಆದ್ದರಿಂದ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ರಾಜ್ಯಪಾಲರೇ ಮಧ್ಯೆ ಪ್ರವೇಶಿಸಿ ಅವರ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.
ಸ್ಪೀಕರ್ ಆಗಿರುವವರು ಅವರದ್ದೇ ಆದ ಜವಾಬ್ದಾರಿಯನ್ನು ನಿರ್ವಹಿಸಬೇಕು. ಅದನ್ನು ಬಿಟ್ಟು ಇಂತಹ ಹೇಳಿಕೆ ಕೊಟ್ಟದ್ದು ಯಾಕೆ? ಖಾದರ್ ಎರಡು ಬಾರಿ ಹೇಳಿಕೆ ಕೊಟ್ಟು ಯಾಕೆ ಸುಮ್ಮನಾಗಿದ್ದಾರೆ ಎಂದು ಪ್ರಶ್ನಿಸಿದರು
ಇನ್ನೂ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಂಧಿತ 8ಮಂದಿಯಲ್ಲಿ ರಂಜಿತ್ ಮತ್ತು ನಾಗರಾಜ ಅವರು ಕಳಸದವರು. ಹೋಟೆಲ್, ಹೋಮ್ ಸ್ಟೇ ಹೊಂದಿರುವ ಮುಹಮ್ಮದ್ ಮುಸ್ತಫ ಎಂಬವರ ಬಳಿ ಅವರು ಕೆಲಸ ಮಾಡುತ್ತಿದ್ದರು. ಈ ಹಿಂದೆ ಮುಸ್ತಫ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಯು.ಟಿ.ಖಾದರ್ ಮತ್ತು ಕಾಂಗ್ರೆಸ್ ಮುಖಂಡ ಇನಾಯತ್ ಅಲಿ ಪಾಲ್ಗೊಂಡಿದ್ದರು ಎಂದು ಸತೀಶ್ ಕುಂಪಲ ಆರೋಪಿಸಿದರು.
ಮುಸ್ತಫನ ಜೊತೆಗೆ ಕೊಲೆ ಪ್ರಕರಣದ ಇನ್ನೊಬ್ಬ ಆರೋಪಿ ಬಜ್ಪೆ ಶಾಂತಿಗುಡ್ಡೆಯ ನಿಯಾಝ್ ಮೀನು ವ್ಯಾಪಾರ ಮಾಡಿಕೊಂಡಿದ್ದನು. ಮುಸ್ತಫನ ಆಪ್ತರು ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವಾಗ ಪೊಲೀಸರು ಆತನನ್ನು ಇನ್ನೂ ಯಾಕೆ ಬಂಧಿಸಿಲ್ಲ? ಕೊಲೆ ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಶಾಮೀಲಾಗಿದ್ದಾರೆ. ಆದರೆ ಪೊಲೀಸರು 8 ಮಂದಿಯನ್ನು ಮಾತ್ರ ಬಂಧಿಸಿದ್ದಾರೆ. ಇದು ಇಷ್ಟಕ್ಕೆ ಸೀಮಿತವೇ ಎಂದರು.