ಪ್ರಕಾಶ ಪರ್ವ: ನಿತೀಶ್, ಲಾಲು ಜತೆ ಮೋದಿ ವೇದಿಕೆ ಹಂಚಿಕೆ

ಗುರುವಾರ, 5 ಜನವರಿ 2017 (13:59 IST)
ಗುರುಗೋವಿಂದ ಸಿಂಗ್ ಜಿ ಮಹಾರಾಜರ 350ನೇ ಜನ್ಮದಿನಾಚರಣೆ ಪ್ರಯುಕ್ತ ಪಾಟ್ಣಾದಲ್ಲಿಂದು ಪ್ರಕಾಶ ಪರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಈ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯವೈರಿಗಳಾದ ಬಿಹಾರ್ ಮುಖ್ಯಮಂತ್ರಿ, ಜೆಡಿ(ಯು) ನಾಯಕ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರ ಜತೆ ಪ್ರಧಾನಿ ಮೋದಿ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ. 
ತಾವಿಂದು ಪಾಟ್ಣಾದಲ್ಲಿರುವುದಾಗಿ ಮೋದಿ ಸರಣಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಪ್ರಕಾಶ ಪರ್ವದ ನಿಮಿತ್ತ ವಿಶೇಷ ಅಂಚೆಚೀಟಿಗಳನ್ನವರು ಬಿಡುಗಡೆ ಮಾಡಲಿದ್ದಾರೆ. 
 
10ನೇ ಸಿಖ್ ಗುರು ಗೋವಿಂದ್ ಸಿಂಗ್ ಅವರ ಪ್ರಕಾಶ್ ಪರ್ವ ಆಚರಣೆ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಅವರ ಶೌರ್ಯ, ಸಾಹಸ ಕಥೆಗಳು ಪ್ರತಿ ಭಾರತೀಯನ ಹೃದಯ ಮತ್ತು ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಗುರುಗೋವಿಂದರು ತಮ್ಮ ಸಂಪೂರ್ಣ ಜೀವನವನ್ನು ಜನರ ಸೇವೆ, ಸತ್ಯ, ನ್ಯಾಯ, ನಿಷ್ಠೆ ಪರ ಹೋರಾಟಕ್ಕೆ ಮೀಸಲಾಗಿಟ್ಟಿದ್ದರು. 350ನೇ ಪ್ರಕಾಶ ಪರ್ವದಲ್ಲಿ ಭಾಗವಹಿಸಲು ಸಂತೋಷವಾಗುತ್ತಿದೆ,  ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ. 
 
ಬಿಹಾರ್ ರಾಜ್ಯಪಾಲ ರಾಮ್ ನಾಥ್ ಕೋವಿಂದ, ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ರವಿಶಂಕರ್ ಪ್ರಸಾದ್, ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಅನೇಕ ಕೇಂದ್ರ ಸಚಿವರು, ಗಣ್ಯರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. 
 

ವೆಬ್ದುನಿಯಾವನ್ನು ಓದಿ