ಅಗರ್ತಲಾ: ನವರಾತ್ರಿ ಉತ್ಸವದ ಮೊದಲ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಾತಾ ತ್ರಿಪುರ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ತ್ರಿಪುರಾದ ಉದಯ್‌ಪುರದಲ್ಲಿರುವ ದೇವಸ್ಥಾನಕ್ಕೆ ತೆರಳಿ ಮೋದಿ ಅವರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಗೋಮತಿ ಜಿಲ್ಲೆಯ ಉದಯಪುರ ಪಟ್ಟಣದಲ್ಲಿ ಜೀರ್ಣೋದ್ಧಾರಗೊಂಡಿರುವ ತ್ರಿಪುರೇಶ್ವರಿ ದೇಗುಲದ ಉದ್ಘಾಟನೆ ನೆರವೇರಿಸಿದರು.
ದೇಶದಲ್ಲಿರುವ 51 ಶಕ್ತಿಪೀಠಗಳಲ್ಲಿ ತ್ರಿಪುರೇಶ್ವರಿ ದೇಗುಲವೂ ಒಂದು. ಮಹಾರಾಜ ಧನ್ಯ ಮಾಣಿಕ್ಯ 1,501ರಲ್ಲಿ ಈ ದೇಗುಲ ನಿರ್ಮಿಸಿದ್ದರು.
ತೀರ್ಥಕ್ಷೇತ್ರ ಪುನರುಜ್ಜಿವನ ಮತ್ತು ಅಧ್ಯಾತ್ಮ ವಿಸ್ತರಣಾ ಅಭಿಯಾನ ಅಡಿಯಲ್ಲಿ 52 ಕೋಟಿ ರೂ. ವೆಚ್ಚದಲ್ಲಿ ಈ ದೇಗುಲ ಜೀರ್ಣೋದ್ಧಾರಗೊಂಡಿದ್ದು, ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.
ಇದಕ್ಕೂ ಮುನ್ನ ಅರುಣಾಚಲ ಪ್ರದೇಶದ ಇಟಾನಗರದಲ್ಲಿ 5,100 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.