ವಯನಾಡು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇರಳದ ವಯನಾಡಿಗೆ ಭೇಟಿ ನೀಡಿ, ಭೀಕರ ಭೂಕುಸಿತದಿಂದ ತತ್ತರಿಸಿರುವ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ಕೈಗೊಂಡರು. ಈ ವೇಳೆ ದುರ್ಘಟನೆಯ ಭೀಕರತೆ ಕಂಡು ಪ್ರಧಾನಿ ದಂಗಾದರು.
ವಯನಾಡಿನಲ್ಲಿ ಈಚೆಗೆ ಸಂಭವಿಸಿದ ಭೂಕುಸಿತ ದುರಂತದಲ್ಲಿ 266ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿವೆ.
ಕೇರಳದ ಚೂರಲ್‌ಮಲ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಗ್ರಾಮಗಳಲ್ಲಿ ಮೋದಿ ಅವರು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ಸಚಿವ, ಬಿಜೆಪಿ ಸಂಸದ ಸುರೇಶ್ ಗೋಪಿ ಅವರು ಸಮೀಕ್ಷೆ ವೇಳೆ ಪ್ರಧಾನಿ ಅವರೊಂದಿಗೆ ಇದ್ದರು.
ವೈಮಾನಿಕ ಸಮೀಕ್ಷೆ ನಂತರ ಕಲ್ಪೆಟ್ಟಾದಲ್ಲಿರುವ ಎಸ್‌ಕೆಎಂಜೆ ಹೈಯರ್ ಸೆಕೆಂಡರಿ ಶಾಲೆ ಸಮೀಪ ಹೆಲಿಕಾಪ್ಟರ್ ಬಂದಿಳಿಯಲಿದ್ದು, ಅಲ್ಲಿಂದ ಅವರು ರಸ್ತೆ ಮಾರ್ಗವಾಗಿ ಕೆಲವು ಭೂಕುಸಿತ ಪೀಡಿತ ಪ್ರದೇಶಗಳಿಗೆ ತೆರಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.