ಗುಂಡಿನ ದಾಳಿಗೊಳಗಾಗಿದ್ದ ಆರ್‌ಎಸ್ಎಸ್ ನಾಯಕ ವಿಧಿ ವಶ

ಗುರುವಾರ, 22 ಸೆಪ್ಟಂಬರ್ 2016 (15:24 IST)
ಕಳೆದ ತಿಂಗಳಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೊಳಗಾಗಿ ಕಳೆದ 45 ದಿನಗಳಿಂದ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ನಾಯಕ, ಬ್ರಿಗೇಡಿಯರ್ ಜಗದೀಶ್ ಗಗ್ನೇಜ( ನಿವೃತ್ತ) ಗುರುವಾರ ಮುಂಜಾನೆ ಇಲ್ಲಿಯ ಡಿಎಮ್‌ಸಿ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 
65 ವರ್ಷದ ಗಗ್ನೇಜ ಸ್ಥಿತಿ ಬುಧವಾರ ರಾತ್ರಿ ಸಂಪೂರ್ಣವಾಗಿ ಹದಗೆಟ್ಟಿತ್ತು. ರಕ್ತದೊತ್ತಡ ಕುಸಿಯುತ್ತಲೇ ಸಾಗಿತ್ತು. ಇಂದು ಮುಂಜಾನೆ 9.16 ರ ವೇಳೆಗೆ ಅವರು ಗತಿಸಿದರು ಎಂದು ಆಸ್ಪತ್ರೆಯ ಡಾ. ಜಿ.ಎಸ್ ವ್ಯಾಂಡರ್ ತಿಳಿಸಿದ್ದಾರೆ.
 
ಬ್ರಿಗೇಡಿಯರ್‌ (ನಿವೃತ್ತ) ಗಗ್ನೇಜ ಅವರ ಮೇಲೆ ಜಾಲಂಧರ್‌ನಲ್ಲಿ ಆ.6ರಂದು ಬೈಕ್‌ನಲ್ಲಿ ಬಂದಿದ್ದ ಹಂತಕರು ದಾಳಿ ನಡೆಸಿದ್ದರು. ಮರುದಿನ ಗಂಭೀರ ಸ್ಥಿತಿಯಲ್ಲಿ ಅವರನ್ನು ಲೂಧಿಯಾನ ಅಸ್ಪತ್ರೆಗೆ ಸೇರಿಸಲಾಗಿತ್ತು.
 
ಆರ್‌ಎಸ್ಎಸ್ ಪಂಜಾಬ್ ಘಟಕದ ಉಪಾಧ್ಯಕ್ಷರಾಗಿರುವ ಗಗ್ನೇಜ ಅವರು ಆಗಸ್ಟ್ 6 ರಂದು ನಗರದ ಕೇಂದ್ರ ಭಾಗದಲ್ಲಿರುವ ವ್ಯಸ್ತ ಮಾರುಕಟ್ಟೆಯಲ್ಲಿ ಮೋಟಾರ್ ಸೈಕಲ್ ಏರಿ ಬಂದ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿಗೊಳಗಾಗಿದ್ದರು. ಘಟನೆ ನಡೆದ ಮರುದಿನ ಗಗ್ನೇಜ ಅವರನ್ನು  ಡಿಎಮ್‌ಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ದಾಳಿಯಾದಾಗಿನಿಂದ ಜೀವರಕ್ಷಕದ ನೆರವಿಂದ ಬದುಕಿದ್ದ ಅವರು ಜೀವನ್ಮರಣದ ಹೋರಾಟದಲ್ಲಿ ಕೊನೆಗೂ ಸೋತು ನಿರ್ಗಮಿಸಿದ್ದಾರೆ. 
 
ಭದ್ರತೆಯ ಕಾರಣದಿಂದ ಅವರ ಮರಣೋತ್ತರ ಪರೀಕ್ಷೆಯನ್ನು ಸಿವಿಲ್ ಆಸ್ಪತ್ರೆ ಬದಲಾಗಿ ಡಿಎಮ್‌ಸಿ‌ಯಲ್ಲಿಯೇ ನಡೆಸಲು ನಿರ್ಧರಿಸಲಾಗಿದೆ. 
 
ಇಂದು ಸಂಜೆ 4ಗಂಟೆಗೆ ಜಲಂಧರ್‌ನ ರಾಮ್ ಬಾಗ್‌ನಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಪಂಜಾಬ್ ಬಿಜೆಪಿ ಉಪಾಧ್ಯಕ್ಷ ಅನಿಲ್ ಸರಿನ್ ತಿಳಿಸಿದ್ದಾರೆ. 
 
ಅವರ ದುಃಖತಪ್ತ ಪತ್ನಿಯ ಮತ್ತು ಇಬ್ಬರು ಪುತ್ರಿಯರು ಜಲಂಧರ್ ಕಡೆಗೆ ಪ್ರಯಣ ಬೆಳೆಸಿದ್ದಾರೆ. 
 
ಗಗ್ನೇಯ್ ಮೇಲಿನ ದಾಳಿ ಪ್ರಕರಣವನ್ನು ಇತ್ತೀಚಿಗೆ ಸಿಬಿಐಗೆ ಒಪ್ಪಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ