ಲಕ್ನೋ : ರೈಲ್ವೇ ಸಿಬ್ಬಂದಿಯೊಬ್ಬ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿ, ಚಲಿಸುತ್ತಿದ್ದ ರೈಲಿನಿಂದ ಹೊರಗೆ ದೂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯ ಲಲಿತ್ಪುರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿ ಯಾದವ್ ತನ್ನ ಸಹೋದರಿಯೊಂದಿಗೆ ರಪ್ತಿಸಾಗರ್ ಎಕ್ಸ್ಪ್ರೆಸ್(12591)ನಲ್ಲಿ ಪ್ರಯಾಣಿಸುತ್ತಿದ್ದರು.
ರೈಲು ಜಿರೋಲಿ ಗ್ರಾಮದ ಬಳಿ ತಲುಪಿದಾಗ, ನೀರಿನ ಬಾಟಲಿಯನ್ನು ಖರೀದಿಸುವ ಹಾಗೂ ಪಾನ್ ಮಸಾಲವನ್ನು ಉಗುಳುವ ವಿಚಾರದಲ್ಲಿ ರವಿ ಯಾದವ್ಗೆ ರೈಲ್ವೇ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆದಿದೆ.
ಬಳಿಕ ರವಿ ಯಾದವ್ ಸಹೋದರಿ ಲಲಿತ್ಪುರ ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದಾರೆ. ಆದರೆ ಸಿಬ್ಬಂದಿ ರವಿ ಯಾದವ್ನನ್ನು ಹೊರ ಹೋಗಲು ಬಿಟ್ಟಿರಲಿಲ್ಲ. ಬಳಿಕ ಸಿಬ್ಬಂದಿ ಆತನಿಗೆ ಥಳಿಸಿ, ಚಲಿಸುತ್ತಿದ್ದ ರೈಲಿನಿಂದಲೇ ಟ್ರ್ಯಾಕ್ಗೆ ದೂಡಿದ್ದಾನೆ ಎಂದು ಆರೋಪಿಸಲಾಗಿದೆ.
ಗಾಯಗೊಂಡಿದ್ದ ರವಿಯನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.