ಮತದಾರರ ಪಟ್ಟಿ ಜತೆ ಆಧಾರ್‌ ಲಿಂಕ್‌ಗೆ ಶೀಘ್ರ ನಿಯಮ ?

ಭಾನುವಾರ, 15 ಮೇ 2022 (07:05 IST)
ನವದೆಹಲಿ : ಮತದಾರರ ಪಟ್ಟಿ ಜತೆ ಆಧಾರ್‌ ಜೋಡಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿಯಮಾವಳಿ ಪ್ರಕಟಿಸಲಿದೆ ಎಂದು ಶನಿವಾರವಷ್ಟೇ ನಿವೃತ್ತರಾದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಅವರು ತಿಳಿಸಿದ್ದಾರೆ. 
 
ಮತದಾರರ ಪಟ್ಟಿಗೆ ಆಧಾರ್‌ ಜೋಡಣೆ ಮಾಡುವುದು ಐಚ್ಛಿಕ. ಆಧಾರ್‌ ನೀಡಲು ಬಯಸದ ವ್ಯಕ್ತಿಗಳು ಅದಕ್ಕೆ ಸಕಾರಣಗಳನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಆಧಾರ್‌ ಜೋಡಣೆಗೆ ಸಂಬಂಧಿಸಿದಂತೆ ಈಗಾಗಲೇ ಕರಡು ಪ್ರಸ್ತಾವಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದೇವೆ. 
 
ಇದಲ್ಲದೆ ಬದಲಾವಣೆ ಮಾಡಬೇಕಾಗಿರುವ ಅರ್ಜಿಗಳನ್ನೂ ರವಾನಿಸಿದ್ದೇವೆ. ಇದೆಲ್ಲವೂ ಕಾನೂನು ಸಚಿವಾಲಯದಲ್ಲಿದೆ. ಸದ್ಯದಲ್ಲೇ ಇದಕ್ಕೆ ಅನುಮತಿ ಸಿಗಲಿದೆ. ಆ ಪ್ರಕಾರ, ನಮ್ಮ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಮಾರ್ಪಡಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. 
 
ಆಧಾರ್‌ ಜೋಡಣೆಗೆ ಬಯಸದ ವ್ಯಕ್ತಿಗಳು ತಾವು ಯಾಕಾಗಿ ಆ ನಿರ್ಧಾರ ಕೈಗೊಂಡಿದ್ದೇವೆ ಎಂಬುದನ್ನು ಹೇಳಬೇಕು. ಆಧಾರ್‌ ಹೊಂದಿಲ್ಲವೇ ಅಥವಾ ಆಧಾರ್‌ಗೆ ಅರ್ಜಿ ಸಲ್ಲಿಸಿಲ್ಲವೇ ಅಥವಾ ಇನ್ನಾವುದೇ ಕಾರಣ ಇದ್ದರೂ ತಿಳಿಸಬೇಕು. ಮತದಾರರ ಪಟ್ಟಿಯನ್ನು ಆಧಾರ್‌ ಜತೆ ಲಿಂಕ್‌ ಮಾಡುವುದರಿಂದ ಮತದಾರರ ಪಟ್ಟಿ ಶುದ್ಧೀಕರಣವಾಗುತ್ತದೆ. ಇದಲ್ಲದೆ ಮತದಾರರಿಗೆ ಆಯೋಗ ಹೆಚ್ಚಿನ ಸೇವೆ ನೀಡಬಹುದಾಗಿರುತ್ತದೆ. ಯಾವಾಗ ಚುನಾವಣೆ ನಡೆಯುತ್ತದೆ, ಬೂತ್‌ ಎಲ್ಲಿದೆ ಎಂಬುದನ್ನೆಲ್ಲಾ ಫೋನ್‌ ಸಂಖ್ಯೆಗೇ ಕಳುಹಿಸಬಹುದಾಗಿರುತ್ತದೆ. ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದನ್ನು ಪತ್ತೆ ಹಚ್ಚಲು ಸುಲಭವಾಗುತ್ತದೆ ಎಂದು ತಿಳಿಸಿದ್ದಾರೆ. 
 
ಮತದಾರರ ಪಟ್ಟಿಜತೆ ಆಧಾರ್‌ ಜೋಡಣೆ ಹಾಗೂ ಹೊಸ ಮತದಾರರ ನೋಂದಣಿಗೆ ಒಂದೇ ದಿನಾಂಕದ ಬದಲು 4 ಕಟಾಫ್‌ ದಿನಾಂಕ ನೀಡಿದ್ದು ತಮ್ಮ ಕಾಲದ ಎರಡು ಮಹತ್ವದ ಸುಧಾರಣೆಗಳಾಗಿವೆ ಎಂದಿದ್ದಾರೆ. ಈ ಮೊದಲು ಜ.1ಕ್ಕೆ 18 ವರ್ಷ ತುಂಬಿದವರು ಮಾತ್ರವೇ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದಾಗಿತ್ತು. ಆನಂತರ 18 ತುಂಬಿದವರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಒಂದು ವರ್ಷ ಕಾಯಬೇಕಾಗಿತ್ತು.
 
ಆಧಾರ್ ಈಗ ಕಡ್ಡಾಯ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ನಂಬರ್ ಹೊಂದಿದ್ದರೆ ಸರ್ಕಾರಿ ಹಾಗೂ ಖಾಸಗಿ ಸೇವೆ ಪಡೆಯುವುದು ಸುಲಭ. ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕೆಂದರೆ ಆಧಾರ್ ಸಂಖ್ಯೆ ಅನಿವಾರ್ಯವಾಗಿದೆ. ಅನೇಕ ಯೋಜನೆಗಳಿಗೆ ಆಧಾರ್ ಲಿಂಕ್ ಆಗದೆ ಹೋದಲ್ಲಿ ಸೇವೆ ಸಿಗೋದಿಲ್ಲ.ಶಾಲೆಗಳಲ್ಲಿಯೂ ಈಗ ಆಧಾರ್ ದಾಖಲೆ ಕೇಳುತ್ತಿದ್ದಾರೆ. ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಲ್ಲದೆ ಹೋದರೂ ಬಹುತೇಕ ಶಾಲೆಗಳು ಆಧಾರ್ ಕೇಳ್ತಿವೆ. ಶಾಲೆಗಳಿಗೆ ಮಾತ್ರವಲ್ಲದೆ ಮಕ್ಕಳ ಪಾಸ್ಪೋರ್ಟ್ ಸೇರಿದಂತೆ ಅನೇಕ ಸೇವೆಗಳಿಗೆ ಆಧಾರ್ ಅಗತ್ಯ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಐದು ವರ್ಷದೊಳಗಿನ ಮಕ್ಕಳಿಗೆಆಧಾರ್ ಕಾರ್ಡ್ ಮಾಡಿಸ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ