ನವದೆಹಲಿ: ಅಗ್ನಿವೀರ್ ಅಜಯ್ ಕುಮಾರ್ ಕುಟುಂಬಕ್ಕೆ ಪರಿಹಾರ ನೀಡಿದ ವಿಚಾರದಲ್ಲಿ ಮತ್ತೆ ಪ್ರಧಾನಿ ಮೋದಿಯನ್ನು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ವಿಮೆ ಹಣ ಮತ್ತು ಪರಿಹಾರ ಹಣಕ್ಕೆ ವ್ಯತ್ಯಾಸವಿದೆ ಎಂದಿದ್ದಾರೆ.
ರಾಹುಲ್ ಗಾಂಧಿ ಈಗಾಗಲೇ ಅಜಯ್ ಕುಮಾರ್ ಕುಟುಂಬಕ್ಕೆ ಪರಿಹಾರ ಹಣ ಸಿಕ್ಕಿಲ್ಲ ಎಂದು ಆರೋಪಿಸಿದ್ದರು. ಇದರ ಬೆನ್ನಲ್ಲೇ ಭಾರತೀಯ ಸೇನೆ ಸ್ಪಷ್ಟನೆ ನೀಡಿತ್ತು. ಅಜಯ್ ಕುಮಾರ್ ಕುಟಂಬಕ್ಕೆ 98 ಲಕ್ಷ ರೂ. ಪರಿಹಾರ ನೀಡಲಾಗಿದೆ. ಉಳಿದ ಹಣವನ್ನು ಹಣ ಮತ್ತು ಇತರೆ ಸೌಲಭ್ಯಗಳ ರೂಪದಲ್ಲಿ ನೀಡಲಾಗುವುದು ಎಂದಿತ್ತು. ಆ ಮೂಲಕ ರಾಹುಲ್ ವಾದ ಸುಳ್ಳು ಎಂದಿತ್ತು.
ಆದರೆ ಈಗ ರಾಹುಲ್ ಮತ್ತೆ ತಮ್ಮ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ. ಪರಿಹಾರ ಹಣಕ್ಕೂ ವಿಮೆ ಹಣಕ್ಕೂ ವ್ಯತ್ಯಾಸವಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಅಜಯ್ ಕುಟುಂಬಕ್ಕೆ ಸಿಕ್ಕಿರುವುದು ವಿಮೆ ಹಣವಷ್ಟೇ ಹೊರತು ಪರಿಹಾರ ಹಣವಲ್ಲ ಎಂದು ಪ್ರತಿಪಾದಿಸಿದ್ದಾರೆ.
ಹುತಾತ್ಮ ಅಜಯ್ ಕುಮಾರ್ ಕುಟುಂಬಕ್ಕೆ ಇದುವರೆಗೆ ಸರ್ಕಾರದ ವತಿಯಿಂದ ಪರಿಹಾರ ಹಣ ಸಿಕ್ಕಿಲ್ಲ. ಪರಿಹಾರ ಹಣ ಮತ್ತು ವಿಮೆ ಹಣಕ್ಕೆ ವ್ಯತ್ಯಾಸವಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಜಯ್ ಕುಟುಂಬಕ್ಕೆ ಗೌರವ ಸಲ್ಲಿಸಬೇಕಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರ ಅದನ್ನು ಮಾಡಿಲ್ಲ. ಸರ್ಕಾರ ಏನೇ ಹೇಳಲಿ, ಇದು ರಾಷ್ಟ್ರೀಯ ರಕ್ಷಣೆಯ ವಿಷಯ. ಅದನ್ನು ನಾನು ಪದೇ ಪದೇ ಪ್ರಶ್ನಿಸುತ್ತಲೇ ಇರುತ್ತೇನೆ. ಇಂಡಿಯಾ ಒಕ್ಕೂಟವನ್ನು ದುರ್ಬಲಗೊಳಿಸಲು ಬಿಡಲ್ಲ ಎಂದಿದ್ದಾರೆ.