ದೆಹಲಿ: ಟಿ20 ವಿಶ್ವಕಪ್ 2024 ರ ಫೈನಲ್ ಗೆದ್ದು ಚಾಂಪಿಯನ್ ಆಗಿರುವ ಟೀಂ ಇಂಡಿಯಾ ಆಟಗಾರರು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅಭಿಮಾನಿಗಳಿಂದ ಭಾರೀ ಸ್ವಾಗತ ಸಿಕ್ಕಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ವೇಳೆ ಹನಿ ಮಳೆಯಾಗುತ್ತಿದ್ದರೂ ಜನ ಕ್ರಿಕೆಟಿಗರನ್ನು ನೋಡಲು ಸಾಲುಗಟ್ಟಿ ನಿಂತಿದ್ದರು. ವಿಶೇಷವಾಗಿ ಕ್ರಿಕೆಟಿಗರ ಸ್ವಾಗತಕ್ಕೆ ಸಾಂಪ್ರದಾಯಿಕ ಉಡುಗೆ ತೊಟ್ಟು ಡೋಲು ಬಡಿದು ಬಾಂಗ್ರಾ ನೃತ್ಯಕ್ಕೆ ನೃತ್ಯಗಾರರು ಹೆಜ್ಜೆ ಹಾಕುತ್ತಿದ್ದರು.
ನಾಯಕ ರೋಹಿತ್ ಶರ್ಮಾ ಟ್ರೋಫಿ ಹಿಡಿದುಕೊಂಡೇ ಹೊರಬಂದರೆ ಇತರೆ ಕ್ರಿಕೆಟಿಗರು ಕುತ್ತಿಗೆಯಲ್ಲಿ ವಿಶ್ವ ಚಾಂಪಿಯನ್ ಮೆಡಲ್ ತೊಟ್ಟುಕೊಂಡಿದ್ದರು. ತಂಡದ ಆಟಗಾರರನ್ನು ಸ್ವಾಗತಿಸಲು ನೃತ್ಯಗಾರರು ಬಾಂಗ್ರಾ ನೃತ್ಯ ಮಾಡುತ್ತಿರುವುದನ್ನು ನೋಡಿ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ನಾಯಕ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಕೆಲವು ಕ್ರಿಕೆಟಿಗರು ಅವರೊಂದಿಗೆ ತಾವೂ ಹೆಜ್ಜೆ ಹಾಕಿ ಖುಷಿ ನೀಡಿದರು. ಅದರಲ್ಲೂ ಸೂರ್ಯಕುಮಾರ್ ಯಾದವ್ ಅಂತೂ ನೃತ್ಯಗಾರರ ಕೈ ಹಿಡಿದುಕೊಂಡು ಕೆಲವು ಹೊತ್ತು ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿ ಮನರಂಜನೆ ನೀಡಿದರು.
ಎಲ್ಲಾ ಆಟಗಾರರು ನೇರವಾಗಿ ವಿಮಾನ ನಿಲ್ದಾಣದಿಂದ ಹೋಟೆಲ್ ರೂಂಗೆ ತೆರಳಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಜೊತೆ ಔತಣಕೂಟದಲ್ಲಿ ಆಟಗಾರರು ಭಾಗಿಯಾಗಲಿದ್ದಾರೆ. ಬಳಿಕ ಸಂಜೆ ಅಭಿಮಾನಿಗಳ ಸಮ್ಮುಖದಲ್ಲಿ ಆಟಗಾರರು ಟ್ರೋಫಿ ಜೊತೆ ಮೆರವಣಿಗೆ ನಡೆಸಲಿದ್ದಾರೆ.