ನವದೆಹಲಿ: ಭಾರತ್ ನ್ಯಾಯ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಾಯಿಗೆ ಬಿಸ್ಕಟ್ ಹಾಕಿ ಅದು ತಿನ್ನದೇ ಇದ್ದಾಗ ಪಕ್ಕದಲ್ಲಿದ್ದ ಕಾರ್ಯಕರ್ತನಿಗೆ ತಿನಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ವಿಡಿಯೋವನ್ನು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿ ಬಿಜೆಪಿ ನಾಯಕರು ರಾಹುಲ್ ಗಾಂಧಿ ಕಾರ್ಯಕರ್ತರನ್ನು ನಾಯಿಯಂತೆ ನಡೆಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದರು. ಆದರೆ ಇದೀಗ ವಿಡಿಯೋ ಬಗ್ಗೆ ರಾಹುಲ್ ಸ್ಪಷ್ಟನೆ ನೀಡಿದ್ದಾರೆ.
ನಾನು ಬಿಸ್ಕಟ್ ಕೊಟ್ಟಿದ್ದು ನಾಯಿಗೆ ಕಾರ್ಯಕರ್ತರಿಗಲ್ಲ
ವೈರಲ್ ವಿಡಿಯೋ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ನಾನು ಬಿಸ್ಕಟ್ ನೀಡಿದ್ದು ನಾಯಿಗೆ ಹೊರತು ಕಾರ್ಯಕರ್ತರಿಗಲ್ಲ. ಆ ವಿಡಿಯೋದಲ್ಲಿದ್ದ ವ್ಯಕ್ತಿ ನಾಯಿಯ ಮಾಲಿಕರು ಎಂದು ಸ್ಪಷ್ಟನೆ ನೀಡಿದ್ದಾರೆ. ನಾಯಿ ಹೆದರಿತ್ತು. ನಾನು ಅದಕ್ಕೆ ತಿನಿಸಲು ಪ್ರಯತ್ನಿಸಿದಾಗ ಅದು ಹೆದರಿತು. ಹಾಗಾಗಿ ಪಕ್ಕದಲ್ಲಿದ್ದ ಅದರ ಮಾಲಿಕನಿಗೆ ನೀಡಿದೆ. ಆಮೇಲೆ ನಾಯಿ ಅವರ ಕೈಯಿಂದ ಬಿಸ್ಕಟ್ ತಿಂದಿತು. ಇದರಿಂದ ಸಮಸ್ಯೆ ಏನು? ಬಿಜೆಪಿಗೆ ನಾಯಿಗಳ ಮೇಲೆ ಯಾಕಿಷ್ಟು ವ್ಯಾಮೋಹ ಎಂದು ನನಗೆ ಅರ್ಥವಾಗುತ್ತಿಲ್ಲ. ನಾಯಿಗಳು ಅವರಿಗೇನಾದರೂ ಹಾನಿ ಮಾಡಿದೆಯಾ? ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಗೆ ಶ್ವಾನಗಳೆಂದರೆ ಅಚ್ಚುಮೆಚ್ಚು. ಹಲವು ಬಾರಿ ಅವರು ನಾಯಿಗಳ ಜೊತೆಗೆ ಕಾಲ ಕಳೆಯುವ ವಿಡಿಯೋಗಳು ವೈರಲ್ ಆಗಿತ್ತು. ಆದರೆ ಈ ಬಾರಿ ಅವರು ನಾಯಿಗೆ ತಿನಿಸಲು ಹೋಗಿ ಬಳಿಕ ಅದನ್ನು ಪಕ್ಕದಲ್ಲಿದ್ದ ವ್ಯಕ್ತಿಗೆ ನೀಡಿದ್ದಕ್ಕೆ ಟೀಕೆಗೊಳಗಾಗಿದ್ದರು. ಆದರೆ ಈಗ ಈ ವಿಡಿಯೋದಲ್ಲಿನ ದೃಶ್ಯದ ಅಸಲಿ ಸಂಗತಿಯನ್ನು ಅವರೇ ಬಹಿರಂಗಪಡಿಸಿದ್ದಾರೆ.