ಬೆಂಗಳೂರು: ಕೇಂದ್ರ ಸರ್ಕಾರದ ತೆರಿಗೆ ವಿತರಣೆ ತಾರತಮ್ಯ ವಿರೋಧಿಸಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ದೆಹಲಿಯ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಪ್ರತಿಭಟನೆಗೆ ಬೆಂಬಲ ನೀಡುವಂತೆ ಸಿಎಂ ಸಿದ್ದರಾಮಯ್ಯ ರಾಜ್ಯದ ಬಿಜೆಪಿ ಸಂಸದರಿಗೂ ಪತ್ರ ಬರೆದಿದ್ದಾರೆ. ಕೇಂದ್ರದ ಮಂಡಿಸಿರುವ ಬಜೆಟ್ ನಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಸೂಕ್ತವಾಗಿ ಹಣ ಹಂಚಿಕೆಯಾಗುತ್ತಿಲ್ಲ. ನಮ್ಮ ತೆರಿಗೆ ಹಣವನ್ನು ನಮಗೇ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದೆ. ಈ ಹೋರಾಟಕ್ಕೆ ದಿಲ್ಲಿ ಚಲೋ ಎಂದು ನಾಮಕರಣ ಮಾಡಿದೆ.
ನಾಳೆ ಬೆಳಿಗ್ಗೆ 11 ಗಂಟೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ನೀವೂ ಪಾಲ್ಗೊಳ್ಳಿ ಎಂದು ಬಿಜೆಪಿ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಆಹ್ವಾನವಿತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಈ ಪ್ರತಿಭಟನೆಯಲ್ಲಿ ಬಿಲ್ ಕುಲ್ ಭಾಗಿಯಾಗಲ್ಲ.
ಈಗಾಗಲೇ ರಾಜ್ಯ ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪ ಅಂಕಿ ಅಂಶ ಸಮೇತ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದರು. ವಿಪಕ್ಷ ನಾಯಕ ಆರ್. ಅಶೋಕ್ ಕೂಡಾ ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಸಾಲುತ್ತಿಲ್ಲವೆಂದು ಕಾಂಗ್ರೆಸ್ ಈ ನಾಟಕ ಮಾಡುತ್ತಿದೆ ಎಂದಿದ್ದಾರೆ.
ಕೇವಲ ಕರ್ನಾಟಕ ಸಿಎಂ ಮಾತ್ರವಲ್ಲ, ತಮಿಳು ನಾಡು ಮತ್ತು ಕೇರಳ ಸಿಎಂ ಕೂಡಾ ಈ ವಾರಗಳಲ್ಲಿ ದೆಹಲಿಯಲ್ಲಿ ಇದೇ ವಿಚಾರವನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಆ ಮೂಲಕ ಲೋಕಸಭೆ ಚುನಾವಣೆಗೆ ಮುನ್ನ ಈ ವಿಚಾರವನ್ನೇ ಕೇಂದ್ರದ ವಿರುದ್ಧ ಅಸ್ತ್ರವಾಗಿ ಬಳಸಲು ಇಂಡಿಯಾ ಬ್ಲಾಕ್ ಸದಸ್ಯ ಪಕ್ಷಗಳು ತೀರ್ಮಾನಿಸಿವೆ.