ನನ್ನ ಮೇಲೆ ಇಡಿ ದಾಳಿಯಾಗುವುದನ್ನು ಕಾಯ್ತಿದ್ದೇನೆ: ರಾಹುಲ್ ಗಾಂಧಿ

Krishnaveni K

ಶುಕ್ರವಾರ, 2 ಆಗಸ್ಟ್ 2024 (11:21 IST)
ನವದೆಹಲಿ: ಸಂಸತ್ ನಲ್ಲಿ ಚಕ್ರವ್ಯೂಹದ ಬಗ್ಗೆ ಮಾತನಾಡಿರುವ ನನ್ನ ಮೇಲೆ ಇಡಿ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಅದನ್ನು ನಾನು ಎದಿರು ನೋಡುತ್ತಿದ್ದೇನೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇತ್ತೀಚೆಗೆ ಲೋಕಸಭೆಯಲ್ಲಿ ಮೋದಿ, ಅಮಿತ್ ಶಾ ಸೇರಿದಂತೆ ಕೇಂದ್ರ ಸರ್ಕಾರದ ನಾಯಕರನ್ನು ಅಭಿಮನ್ಯುವಿನ ಚಕ್ರವ್ಯೂಹಕ್ಕೆ ಹೋಲಿಸಿದ್ದರು. ಚಕ್ರವ್ಯೂಹ ಎಂದರೆ ಪದ್ಮವ್ಯೂಹ. ಪದ್ಮ ಎಂದರೆ ಕಮಲ. ಅದೇ ರೀತಿ ಕೇಂದ್ರ ಸರ್ಕಾರ ಪದ್ಮವ್ಯೂಹ ಬಳಸಿ ರೈತರು,ಮಹಿಳೆಯರು, ಯುವಕರ ಭವಿಷ್ಯವನ್ನೇ ಹಾಳು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.

ಇದಕ್ಕೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ತೀವ್ರ ತಿರುಗೇಟು ನೀಡಿದ್ದರು. ಮಹಾಭಾರತವನ್ನು ಅರ್ದಂಬರ್ಧ ಓದಿಕೊಂಡು ತಪ್ಪು ತಪ್ಪಾಗಿ ಏನೇನೋ ಹೇಳಿದ್ದಾರೆ ಎಂದು ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ರಾಹುಲ್ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ತಮ್ಮ ಮೇಲೆ ಸಂಭಾವ್ಯ ಇಡಿ ದಾಳಿ ಬಗ್ಗೆ ಮಾತನಾಡಿದ್ದಾರೆ.

‘ಸಂಸತ್ ನಲ್ಲಿ ನಾನು ಚಕ್ರವ್ಯೂಹದ ಬಗ್ಗೆ ಮಾತನಾಡಿದ್ದು ಕೆಲವರಿಗೆ ಇಷ್ಟವಾಗಿಲ್ಲ. ಇಡಿ ಇಲಾಖೆಯ ಆಂತರಿಕ ವರದಿಗಳ ಪ್ರಕಾರ ಸದ್ಯದಲ್ಲೇ ನನ್ನ ಮೇಲೆ ಇಡಿ ದಾಳಿ ಮಾಡಲು ತಯಾರಿ  ನಡೆದಿದೆ. ನನ್ನ ಮೇಲೆ ಚಹಾ, ಬಿಸ್ಕೆಟ್ ಬಿಸಾಕುವುದನ್ನು ತೆರೆದ ಕೈಗಳಿಂದ ಸ್ವಾಗತಿಸಲು ಕಾಯುತ್ತಿದ್ದೇನೆ’ ಎಂದು ರಾಹುಲ್ ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ