ರಾಂಚಿಯಲ್ಲಿ ಇಡಿ ದಾಳಿ: ಜಾರ್ಖಂಡ್ ಸಚಿವರ ಕಾರ್ಯದರ್ಶಿ ಬಳಿ ₹25 ಕೋಟಿ ನಗದು ಪತ್ತೆ

Sampriya

ಸೋಮವಾರ, 6 ಮೇ 2024 (14:14 IST)
Photo Courtesy X
ರಾಂಚಿ: ಇಡಿ ಅಧಿಕಾರಿಗಳು ರಾಂಚಿಯ ಹಲವು ಸ್ಥಳಗಳಲ್ಲಿ ಸೋಮವಾರ ದಾಳಿ ನಡೆಸಿದ್ದಾರೆ. ಜಾರ್ಖಂಡ್ ಸಚಿವ ಅಲಂಗೀರ್‌ ಆಲಂ ಅವರ ಕಾರ್ಯದರ್ಶಿ ಸಂಜೀವ್ ಲಾಲ್ ಅವರ ಮನೆಯಲ್ಲಿ ₹25 ಕೋಟಿ ನಗದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

70 ವರ್ಷದ ಕಾಂಗ್ರೆಸ್ ನಾಯಕ ಅಲಂಗೀರ್ ಅಲಂ ಅವರು ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಖಾತೆ ಸಚಿವರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಡೆದ ಈ ದಾಳಿಯು ರಾಜಕೀಯ ವಲಯದಲ್ಲಿ ಚರ್ಚೆಗೆ ಒಳಗಾಗಿದೆ. ಪ್ರತಿಪಕ್ಷಗಳ ವಿರುದ್ಧ ಬಿಜೆಪಿಗೆ ಇದು ಅಸ್ತ್ರವಾಗಿ ಪರಿಣಮಿಸಿದೆ.

ಸಂಜೀವ್ ಲಾಲ್‌ನ ಕೆಲಸದವನ ಮನೆಯಲ್ಲಿ ಸಿಕ್ಕ ನೋಟಿನ ಕಂತೆಗಳ ಬೃಹತ್ ರಾಶಿ ಕಂಡು ಸ್ವತಃ ಇಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಈ ಹಣವನ್ನು ಲೆಕ್ಕ ಮಾಡಲು ಅಧಿಕ ಸಂಖ್ಯೆಯಲ್ಲಿ ನಗದು ಎಣಿಕೆ ಯಂತ್ರವನ್ನು ಸ್ಥಳಕ್ಕೆ ತರಿಸಿಕೊಳ್ಳಲಾಗುತ್ತಿದೆ.

ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ಆಗಿದ್ದ ವೀರೇಂದ್ರ ರಾಮ್ ಅವರನ್ನು ₹100 ಕೋಟಿ ಮೌಲ್ಯದ ಆಸ್ತಿ ಗಳಿಸಿದ ಆರೋಪದ ಮೇಲೆ ಕಳೆದ ವರ್ಷ ಬಂಧಿಸಲಾಗಿತ್ತು. ವೀರೇಂದ್ರ ಅವರ ಬಳಿ ಜಾರ್ಖಂಡ್‌ನ ಕೆಲವು ರಾಜಕಾರಣಿಗಳೊಂದಿಗಿನ ವ್ಯವಹಾರದ ವಿವರಗಳನ್ನು ಹೊಂದಿರುವ ಪೆನ್‌ಡ್ರೈವ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.  ಇದೇ ಪ್ರಕರಣ ಸಂಬಂಧ ಸಂಜೀವ್ ಲಾಲ್ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ