ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ವಯನಾಡು ಮತ್ತು ರಾಯ್ ಬರೇಲಿಯಲ್ಲಿ ಸ್ಪರ್ಧಿಸಿ ಗೆದ್ದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಈಗ ಯಾವ ಕ್ಷೇತ್ರವನ್ನು ಆಯ್ಕೆ ಮಾಡುವುದು ಎಂಬ ಸಂದಿಗ್ಧತೆ ಎದುರಾಗಿದೆ.
ರಾಯ್ ಬರೇಲಿ ರಾಹುಲ್ ಗಾಂಧಿ ಮಾತ್ರವಲ್ಲ, ನೆಹರೂ ಕುಟುಂಬಕ್ಕೇ ತವರಿದ್ದಂತೆ. ಇಲ್ಲಿ ತಲೆತಲಾಂತರದಿಂದ ನೆಹರೂ ಕುಟುಂಬ ಸ್ಪರ್ಧೆ ನಡೆಸುತ್ತಲೇ ಇದೆ. ಈ ಬಾರಿ ರಾಹುಲ್ ಗಾಂಧಿ ಈ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಕಂಡಿದ್ದರು. ಇದರ ಬೆನ್ನಲ್ಲೇ ಈಗ ಒಂದು ಕ್ಷೇತ್ರವನ್ನು ಬಿಡುವ ಅನಿವಾರ್ಯತೆ ರಾಹುಲ್ ಗೆ ಎದುರಾಗಿದೆ.
ಇದೀಗ ಕಾಂಗ್ರೆಸ್ ಮೂಲಗಳ ಪ್ರಕಾರ ರಾಹುಲ್ ವಯನಾಡು ಕ್ಷೇತ್ರವನ್ನು ಬಿಡಬಹುದು ಎನ್ನಲಾಗಿದೆ. ರಾಯ್ ಬರೇಲಿಯಾದರೆ ಕ್ಷೇತ್ರಕ್ಕೆ ಹೋಗಿ ಬರುವುದು ಸುಲಭ ಮತ್ತು ಸನಿಹ ಕೂಡಾ. ಆದರೆ ವಯನಾಡಿಗೆ ಆಗಾಗ ಬರುವುದಕ್ಕೆ ಆಗುವುದಿಲ್ಲ. ಹೀಗಾಗಿ ವಯನಾಡನ್ನು ಬಿಟ್ಟು ರಾಯ್ ಬರೇಲಿಯನ್ನು ಆರಿಸುವ ಸಾಧ್ಯತೆ ಹೆಚ್ಚಿದೆ.
ಆದರೆ 2019 ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೈ ಹಿಡಿದಿದ್ದು ಇದೇ ವಯನಾಡು ಕ್ಷೇತ್ರ. ಅ ಚುನಾವಣೆಯಲ್ಲಿ ರಾಹುಲ್ ಅಮೇಠಿ ಮತ್ತು ವಯನಾಡಿನಲ್ಲಿ ಸ್ಪರ್ಧಿಸಿದ್ದರು. ದುರದೃಷ್ಟವಶಾತ್ ಅಮೇಠಿಯಲ್ಲಿ ಸೋತಿದ್ದರು. ಆಗ ರಾಹುಲ್ ರನ್ನು ಗೆಲ್ಲಿಸಿದ್ದು ವಯನಾಡಿನ ಜನ. ಹೀಗಾಗಿ ಈಗ ಅಂದು ಅಮೇಠಿಯಲ್ಲಿ ಸೋತು ಸಂಕಷ್ಟಕ್ಕೀಡಾಗಿದ್ದ ರಾಹುಲ್ ಗಾಂಧಿ ಕೈ ಹಿಡಿದಿದ್ದ ವಯನಾಡನ್ನೇ ಈಗ ಕೈ ಬಿಡುತ್ತಾರಾ ಎಂಬ ಪ್ರಶ್ನೆ ಮೂಡಿದೆ.