ರಾಜ್ಯಸಭೆ ಚುನಾವಣೆ ಗೆಲ್ಲಲೇ ಬೇಕೆಂಬ ಜಿದ್ದು ಬಿಜೆಪಿಗೇಕೆ?
ಮಂಗಳವಾರ, 8 ಆಗಸ್ಟ್ 2017 (09:54 IST)
ನವದೆಹಲಿ: ಸಂಸತ್ತಿನ ಮೇಲ್ಮನೆಯ ಮೂರು ಸ್ಥಾನಗಳಿಗೆ ಗುಜರಾತ್ ನಲ್ಲಿ ನಡೆಯುತ್ತಿರುವ ಚುನಾವಣೆ ದೇಶದ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಅಷ್ಟಕ್ಕೂ ಯಾಕೆ ಈ ಚುನಾವಣೆಗೆ ಇಷ್ಟೆಲ್ಲಾ ಕಸರತ್ತು?
ಈ ವರ್ಷಾಂತ್ಯಕ್ಕೆ ಗುಜರಾತ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪ್ರಧಾನಿ ಮೋದಿ ತವರೂರು ಗುಜರಾತ್ ನಲ್ಲಿ ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಚಾರ.
ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೋದಿ ಪ್ರಧಾನಿಯಾದ ಮೇಲೆ ಈ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದು. ಆ ಚುನಾವಣೆಗೆ ಮೊದಲು ಪೂರ್ವಭಾವಿ ಚುನಾವಣೆ ಎಂದೇ ಪರಿಗಣಿಸಲಾಗಿರುವ ರಾಜ್ಯಸಭೆ ಚುನಾವಣೆ ಮುಂಬರುವ ಚುನಾವಣೆಯ ದಿಕ್ಸೂಚಿ ಎಂದೇ ಬಿಜೆಪಿ, ಕಾಂಗ್ರೆಸ್ ಅಂದುಕೊಂಡಿದೆ.
ಒಂದೆಡೆ ಸೋನಿಯಾ ಆಪ್ತ ಅಹಮ್ಮದ್ ಪಟೇಲ್ ಇನ್ನೊಂದೆಡೆ ಬಲ್ವಂತ್ ಸಿಂಗ್. ಬಿಜೆಪಿಗೆ ಅಹಮ್ಮದ್ ಪಟೇಲ್ ರನ್ನು ಸೋಲಿಸಿ ಇನ್ನೂ ಗುಜರಾತ್ ನಲ್ಲಿ ತನ್ನ ಪ್ರಾಬಲ್ಯವೇ ಇದೆ ಎಂದು ತೋರಿಸಿಕೊಡಬೇಕು. ಅತ್ತ ಕಾಂಗ್ರೆಸ್ ಗೆ ಅಹಮ್ಮದ್ ಪಟೇಲ್ ರನ್ನು ಗೆಲ್ಲಿಸಿ ಸೋನಿಯಾ ಗಾಂಧಿಯವರ ವಿಶ್ವಾಸ ಮರಳಿಸಬೇಕು.
ಅಲ್ಲದೆ, ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಗೆ ಅಹಮ್ಮದ್ ಪಟೇಲ್ ಗೆದ್ದರೆ, ವಿಧಾನಸಭೆ ಚುನಾವಣೆಗೆ ತಯಾರಾಗಲು ಉತ್ಸಾಹ ಬರುತ್ತದೆ ಎಂಬ ಧಾವಂತ. ಹೀಗಾಗಿ ಇಂದಿನ ಚುನಾವಣೆ ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ.