10ರ ಕಂದಮ್ಮನ ಮೇಲೆ ಅತ್ಯಾಚಾರ!

ಬುಧವಾರ, 6 ಅಕ್ಟೋಬರ್ 2021 (09:07 IST)
ಜೈಪುರ : ರಾಜಸ್ಥಾನ ರಾಜಧಾನಿ ಜೈಪುರನ ಪೋಕ್ಸೋ ಕೋರ್ಟ್-3-ಮೆಟ್ರೋ-1  10 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ತೀರ್ಪನ್ನು 10 ದಿನದಲ್ಲಿ ಪ್ರಕಟಿಸಿದೆ. ನ್ಯಾಯಾಲಯ ಆಪರಾಧಿಗೆ 20 ವರ್ಷ ಜೈಲು ಶಿಕ್ಷೆಯ ತೀರ್ಪು ನೀಡಿದೆ.

ರಾಜಸ್ಥಾನದ ನ್ಯಾಯಾಲಯದ ಇತಿಹಾಸದಲ್ಲಿ ಪ್ರಕರಣದ ವಿಚಾರಣೆ ನಡೆಸಿ 10 ದಿನದಲ್ಲಿ ತೀರ್ಪು ನೀಡಿದ ಮೊದಲ ಕೇಸ್ ಇದಾಗಿದೆ. ಸೆಪ್ಟೆಂಬರ್ 26ರಂದು ಕೋಟಖ್ವಾದಾ ವ್ಯಾಪ್ತಿಯಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಅಷ್ಟೇ ವೇಗವಾಗಿ ತನಿಖಾ ವರದಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ 5 ದಿನ ವಿಚಾರಣೆ ನಡೆಸಿದ ಬಳಿಕ ತೀರ್ಪು ಪ್ರಕಟಿಸಿದೆ.
ಪ್ರಕರಣದ ಸಂತ್ರಸ್ತೆ ವಿಡಿಯೋ ಕಾನ್ಪೆರೆನ್ಸ್ ಮೂಲಕವೇ ನ್ಯಾಯಾಧೀಶರ ಮುಂದೆ ತನ್ನ ಹೇಳಿಕೆಯನ್ನು ದಾಖಲಿಸಿದ್ದಳು. ವಾದ ಆಲಿಸಿದ ನ್ಯಾಯಾಧೀಶ ವಿಕಾಸ್ ಖಂಡೇಲ್ವಾಲ್ 10 ದಿನದಲ್ಲಿಯೇ ಮಹತ್ವದ ತೀರ್ಪು ನೀಡಿದ್ದಾರೆ. ಬಾಲಕಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿಡಿಯೋ ಕಾನ್ಪರೆನ್ಸ್ ಮೂಲಕ ಹೇಳಿಕೆ ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ರಾಜಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಅತ್ಯಾಚಾರ ಸಂತ್ರಸ್ತೆ ವಿಡಿಯೋ ಕಾನ್ಪರೆನ್ಸ್ ಮೂಲಕ ಹೇಳಿಕೆ ದಾಖಲಿಸಿದ ಪ್ರಕರಣ ಇದಾಗಿದೆ. ನ್ಯಾಯಾಲಯ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಾಗ ಅಪರಾಧಿ ತಲೆ ತಗ್ಗಿಸಿಯೇ ನಿಂತಿದ್ದನು.
ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ
ಸೆಪ್ಟೆಂಬರ್ 26ರಂದು ಬಾಲಕಿ ಮನೆಗೆ ಸಾಮಗ್ರಿ ತರಲು ಅಂಗಡಿಗೆ ಹೋಗಿದ್ದಳು. ಅಂಗಡಿಯಿಂದ ಮನೆಗೆ ಹಿಂದಿರುಗುವಾಗ ಅಪರಾಧಿ ಈ ಕೃತ್ಯ ಎದುರಾಗಿದ್ದಾನೆ. ನಿಮ್ಮ ಚಿಕ್ಕಪ್ಪನಿಗೆ ಹಣ ನೀಡಲು ತೆರಳುತ್ತಿದ್ದೇನೆ. ನನ್ನ ಜೊತೆ ಬಾ ಎಂದು ಕರೆದುಕೊಂಡು ಹೋಗಿದ್ದಾನೆ. ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡ ಹೋದ ಕಾಮುಕ ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ. ಬಾಲಕಿ ಪ್ರಜ್ಞೆ ತಪ್ಪಿದ ಕೂಡಲೇ ಆಕೆ ಸಾವನ್ನಪ್ಪಿದ್ದಾಳೆಂದು ತಿಳಿದು ಸ್ಥಳದಿಂದ ಎಸ್ಕೇಪ್ ಆಗಿದ್ದನು.
ಏಳು ಗಂಟೆಯಲ್ಲಿ ತನಿಖೆ ಮುಗಿಸಿದ ಪೊಲೀಸರು
ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಪೋಷಕರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದರು. ಆರೋಪಿ ಬಂಧನದ ಏಳು ಗಂಟೆಯೊಳಗೆ ತನಿಖಾ ವರದಿ ಸಿದ್ಧಪಡಿಸಿದ್ದ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ಶೀಘ್ರ ನಡೆಯಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಚನಾ ಮನ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಮನವಿ ಪುರಸ್ಕರಿಸಿದ ನ್ಯಾಯಲಯ ವಿಚಾರಣೆ ಆರಂಭಿಸಿದ 5 ದಿನಗಳಲ್ಲಿಯೇ ತೀರ್ಪು ನೀಡಿದೆ. ಸೋಮವಾರ ಕೊನೆಯ ಬಾರಿ ಪ್ರಕರಣದ ವಿಚಾರಣೆ ನಡೆದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ