ದೂರು ನೀಡಲು ಹೋದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಅಧಿಕಾರಿ
ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಅಪ್ರಾಪ್ತೆ ಮೇಲೆ ಮುಖ್ಯ ಠಾಣಾಧಿಕಾರಿ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಉತ್ತರಪ್ರದೇಶ ಲಲಿತ್ ಪುರದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಠಾಣಾಧಿಕಾರಿ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು ಮೂವರನ್ನು ಬಂಧಿಸಲಾಗಿದೆ. ಅತ್ಯಾಚಾರಗೈದ ಪೊಲೀಸ್ ಅಧಿಕಾರಿ ತಲೆಮಾರಿಸಿಕೊಂಡಿದ್ದು ಶೋಧ ನಡೆದಿದೆ. ಇದರ ನಡುವೆ ಆತನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಸಂತ್ರಸ್ತೆ ತಾಯಿ ತಮ್ಮ ಮಗಳನ್ನು ಏಪ್ರಿಲ್ 22ರಂದು ನಾಲ್ವರು ಮಧ್ಯಪ್ರದೇಶದ ಭೋಪಾಲ್ ಗೆ ಕರೆದೊಯ್ದು ೩ ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿ ಹಿಂಸಿಸಿದ್ದಾರೆ. ನಂತರ ಪಾಲಿ ಪೊಲೀಸ್ ಬಳಿ ಬಿಟ್ಟು ಹೋಗಿದ್ದು ಅಲ್ಲಿ ದೂರು ನೀಡಲು ಹೋದಾಗ ಠಾಣಾಧಿಕಾರಿಯೇ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿದ್ದಾರೆ.
ಬಾಲಕಿ ನಂತರ ಸುಧಾರಿಸಿಕೊಂಡು ಹತ್ತಿರದಲ್ಲಿದ್ದ ಸರ್ಕಾರೇತರ ಸಂಸ್ಥೆ ಮಕ್ಕಳ ಕ್ಷೇಮಾಭಿವೃದ್ದಿ ಕೇಂದ್ರ ತಲುಪಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಸಂಘಟನೆಯ ಸದಸ್ಯರು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದಾಗ ಪ್ರಕರಣ ದಾಖಲಾಗಿದೆ.
ಈ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು ಪ್ರತಿಪಕ್ಷ ಸಮಾಜವಾದಿ ಹಾಗು ಕಾಂಗ್ರೆಸ್ ನಾಯಕರು ಯೋಗಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ.
ರಾಜ್ಯದ ಹೆಣ್ಣುಮಕ್ಕಳು ಎಲ್ಲಿಗೆ ಹೋಗಬೇಕು ಮತ್ತು ಯಾರನ್ನು ನಂಬಬೇಕು ಎಂದು ಸಮಾಜವಾದಿ ಪಕ್ಷದ ವಕ್ತಾರರು ಪ್ರಶ್ನಿಸಿದ್ದಾರೆ. ಮುಂದುವರೆದು, ಸದ್ಯ ಉದ್ಭವವಾಗಿರುವ ಪ್ರಶ್ನೆ ಏನೆಂದರೆ ಯಾರನ್ನು ನಂಬಬೇಕು ಮತ್ತು ಯಾರನನ್ನು ನಂಬಬಾರದು ಎಂದು ಪ್ರಶ್ನಿಸಿದೆ.
ಈ ನಡುವೆ ಸಮಾಜವಾದಿ ಪಕ್ಷದ ಮುಖಸ್ಥ ಪ್ರತಿಪಕ್ಷ ನಾಯಕ ಅಖಿಲೇಶ್ ಯಾದವ್ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಘಟನೆಯ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ, ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕ ಗಾಂಧಿ ವಾದ್ರಾ ಪೊಲೀಸ್ ಠಾಣೆಗಳು ಮಹಿಳೆಯರಿಗೆ ಸುರಕ್ಷಿತವಲ್ಲದಿದ್ದರೆ ಅವರು ದೂರು ನೀಡಲು ಎಲ್ಲಿಗೆ ಹೋಗಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇಂತಹ ಘಟನೆಗಳನ್ನು ತಡೆಯಲು ರಾಜ್ಯ ಸರ್ಕಾರಗಂಭೀರ ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಹೇಳಿದ್ದಾರೆ.