ನವದೆಹಲಿ, ಆ.25 : ಭಾರತದಲ್ಲಿ 25ಸಾವಿರಕ್ಕೆ ಸೀಮಿತಗೊಂಡಿದ್ದ ಕೊರೊನಾ ಸೋಂಕಿನ ಪ್ರಮಾಣ ಇಂದು ದಿಢೀರ್ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 37,593 ಮಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ದೇಶದ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 3,25, 12,366 ಕೋಟಿಗೆ ಏರಿಕೆಯಾದಂತಾಗಿದೆ.
ನಿನ್ನೆಯಿಂದ 648 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಇದುವರೆಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,35,758 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಕೊರೊನಾ ಚೇತರಿಕೆ ಪ್ರಮಾಣ ಶೇ.97.67ಕ್ಕೆ ಏರಿಕೆಯಾಗಿದ್ದರೂ ಸಕ್ರಿಯ ಸೋಂಕಿನ ಪ್ರಮಾಣದಲ್ಲಿ ಶೇ.0.99ರಷ್ಟು ಹೆಚ್ಚಳವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕಳೆದ ಮೇ ತಿಂಗಳಿನಲ್ಲಿ 2 ಕೋಟಿಯಷ್ಟಿದ್ದ ಕೊರೊನಾ ಸೋಂಕಿತರ ಸಂಖ್ಯೆ ಜೂ.23ರ ವೇಳೆಗೆ 3 ಕೋಟಿಯಾಗಿತ್ತು. ಇದೀಗ ದೇಶದ ಒಟ್ಟು ಸೋಂಕಿತರ ಸಂಖ್ಯೆ 3.25 ಕೋಟಿ ಗಡಿ ದಾಟುತ್ತಿದೆ. ದೇಶಾದ್ಯಂತ ಕೊರೊನಾ ಲಸಿಕಾ ಆಂದೋಲನ ನಡೆಸಲಾಗುತ್ತಿದೆ. ಸದ್ಯದಲ್ಲಿಯೇ ಮೂರನೆ ಅಲೆ ಅಬ್ಬರಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿರುವುದರಿಂದ ಸೋಂಕಿನ ಪ್ರಮಾಣ 4 ಕೋಟಿ ಗಡಿ ದಾಟದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಿದೆ.