ರಾವತ್ ಬಾಹುಬಲಿ ಅವತಾರಕ್ಕೆ ನೋಟಿಸ್

ಶನಿವಾರ, 4 ಫೆಬ್ರವರಿ 2017 (17:28 IST)
ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ಅವರನ್ನು ಬಾಹುಬಲಿಯಾಗಿ ತೋರಿಸಿದ್ದ ಕಾಂಗ್ರೆಸ್‌ಗೆ ಸಂಕಷ್ಟ ತಲೆದೋರಿದೆ. ಈ ಕುರಿತು ಉತ್ತರ ನೀಡುವಂತೆ ಚುನಾವಣಾ ಆಯೋಗ ಕಾಂಗ್ರೆಸ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.  

ಈ ವಿಡಿಯೋದಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದ್ದು, ರಾವತ್ ತಾನು ರಾಜ್ಯಕ್ಕಿಂತ ಬಲಶಾಲಿ, ದೊಡ್ಡವನು ಎಂದು ತೋರಿಸಲು ಯತ್ನಿಸಿದ್ದಾರೆ. ಕಾಂಗ್ರೆಸ್ ರಾಜಕೀಯ ಎದುರಾಳಿಗಳನ್ನು ಗೌರವಿಸುವುದಿಲ್ಲ. ನಮ್ಮ ಹಿರಿಯ ನಾಯಕರನ್ನು ಅಗೌರವಯುತವಾಗಿ ತೋರಿಸಲಾಗಿದೆ, ಎಂದು ಪುನೀತ್ ಮಿತ್ತಲ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯ  ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. 
 
ಈ ದೂರಿನ ಆಧಾರದ ಮೇಲೆ ಉತ್ತರಾಖಂಡದ ಮುಖ್ಯ ಚುನಾವಣಾಧಿಕಾರಿ ರಾಧಾ ರಾತುರಿ ಕಾಂಗ್ರೆಸ್‌ಗೆ ನೋಟಿಸ್ ಜಾರಿ ಮಾಡಿದ್ದು 24ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದೆ. 
 
ವಿಡಿಯೋ ಹರಿದಾಡುತ್ತಿದ್ದಂತೆ ನಾನು ಯಾವುದೇ 'ಬಾಹುಬಲಿ' ರೂಪವಲ್ಲ. ಒಬ್ಬ ಸಾಮಾನ್ಯ ಜನಸೇವಕ ಅಷ್ಟೆ ಅಂದಿದ್ದ ರಾವತ್ ಈ ವಿಡಿಯೋವನ್ನು ಮಾಡಿದ್ದು ಕಾಂಗ್ರೆಸ್ ಕಡೆಯವರಲ್ಲ, ಯಾರೋ ನಮ್ಮ ಹಿತಚಿಂತಕರು ಎಂದಿದ್ದಾರೆ. 
 
ಉತ್ತರಾಖಂಡದ ಮುಖ್ಯಮಂತ್ರಿ ಹರೀಶ್ ರಾವತ್ ವಿಶ್ವದಾದ್ಯಂತ ಸಂಚಲನ ಮೂಡಿಸಿದ ತೆಲುಗು ಸಿನಿಮಾ ಬಾಹುಬಲಿ ಅವತಾರದಲ್ಲಿ ತೋರಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಬಾಹುಬಲಿ ಅವತಾರ ತಾಳಿರುವ ರಾವತ್ ಸಂಪೂರ್ಣ ರಾಜ್ಯವನ್ನು ಹೆಗಲ ಮೇಲೆ ಹೊತ್ತಿದ್ದರೆ  ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ದಿಗ್ಭ್ರಮೆಯಿಂದ ನೋಡುತ್ತಿದ್ದಾರೆ- ಈ ದೃಶ್ಯಾವಳಿಗಳನ್ನೊಳಗೊಂಡ ಈ ವಿಡಿಯೋ ಯೂ-ಟ್ಯೂಬ್‌ನಲ್ಲಿ 11,000ಕ್ಕಿಂತ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 
 
ವಿಡಿಯೋದ ಕೊನೆಯಲ್ಲಿ ಸಂದೇಶವೂ ಇದೆ- ದಿಲ್ ಕಿ ಬಾತ್ ಸುನೆ..ಹರೀಶ್ ರಾವತ್‌ಕೋ ಚುನೆ (ಮನಸ್ಸಿನ ಮಾತು ಕೇಳಿ, ಹರೀಶ್ ರಾವತ್‍ರನ್ನು ಆಯ್ಕೆ ಮಾಡಿ). 
 
ಉತ್ತರಾಖಂಡ ವಿಧಾನಸಭೆಗೆ ಇದೇ 15ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ