ಪಠ್ಯದಿಂದ ನನ್ನ ಕಥೆಯನ್ನೂ ಕೈಬಿಡಿ: ಸರಕಾರಕ್ಕೆ ದೇವನೂರು ಮಹಾದೇವ ಪತ್ರ

ಮಂಗಳವಾರ, 24 ಮೇ 2022 (17:19 IST)
ಪಠ್ಯದಿಂದ ನನ್ನ ಕಥೆಯನ್ನೂ ಕೈಬಿಡಿ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲೊ ನಡೆಯುತ್ತಿರುವ ಪಠ್ಯ ಪರಿಷ್ಕರಣೆ ವಿವಾದ ಕುರಿತ ಚರ್ಚೆಯನ್ನು ಗಮನಿಸಿದ್ದು, ಶಾಲಾ ಮಕ್ಕಳ ಪಠ್ಯವನ್ನು ಕೇಸರೀಕರಣ ಮಾಡುವ ಪ್ರಯತ್ನಕ್ಕೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
೧೦ನೇ ತರಗತಿಯ ಪಠ್ಯದಲ್ಲಿ ನನ್ನದೂ ಒಂದು ಪತ್ರವಿದೆ  ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಪಠ್ಯ ಪರಿಷ್ಕರಣೆಯಲ್ಲಿ ಇಲ್ಲ ಅಥವಾ ಉಂಟು ಅಂತ ಗಳಿಗೆಗೊಂದು ಬದಲಾವಣೆ ಆಗುತ್ತಿದೆ. ಹೀಗಾಗಿ ಈ ಪಠ್ಯದಲ್ಲಿ ನನ್ನ ಕಥೆ ಸೇರಿಸದಿದ್ದರೆ ನನಗೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ಪಠ್ಯದಲ್ಲಿ ನನ್ನ ಕಥೆ ಸೇರಿಸುವ ಕುರಿತು ಈ ಹಿಂದೆ ತಾನು ನೀಡಿದ ಅನುಮತಿಯನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ಅವರು ಸರಕಾರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಾಹಿತಿಗಳಾದ ಎಲ್. ಬಸವಾರಾಜು, ಎ.ಎನ್. ಮೂರ್ತಿರಾವ್, ಪಿ ಲಂಕೇಶ್, ಸಾರಾ ಅಬೂಬಕ್ಕರ್ ಮುಂತಾದವರ ಬರಹಗಳನ್ನು ಪಠ್ಯದಿಂದ ಕೈ ಬಿಡಲಾಗಿದೆ. ಇವರ ಪಠ್ಯ ಕೈಬಿಟ್ಟವರಿಗೆ ಕನ್ನಡ, ನಾಡು, ನುಡಿ, ಸಂಸ್ಕೃತಿ ಬಗ್ಗೆ ಏನೇನು ತಿಳಿದಿಲ್ಲ ಎಂಬುದು ಅರ್ಥವಾಗುತ್ತದೆ ಎಂದು ಅವರು ಇತರೆ ಸಾಹಿತಿಗಳ ವಿಷಯವನ್ನು ಪಠ್ಯದಿಂದ ತೆಗೆದು ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೋಹಿತ್ ಚಕ್ರತೀರ್ಥ ನಾನು ಲೇಖಕರ ಜಾತಿ ಹುಡುಕಲು ಹೋಗಿಲ್ಲ ಎಂದು ಹೇಳಿಕೆ ಗಮನಿಸಿದ್ದೇನೆ. ಭಾರತದಂಥಾ ಸಂಕೀರ್ಣವಾದ ದೇಶದಲ್ಲಿ ಪ್ರಜ್ಞಾಪೂರ್ವಕವಾಗಿ ಜಾತಿಯನ್ನು ಗುರುತಿಸದಿದ್ದರೆ ಸಹಜವಾಗಿ ಅಲ್ಲಿ ಶೇ.90ರಷ್ಟು ಅವರದ್ದೇ ಜಾತಿಯವರು ತುಂಬಿಕೊಂಡಿರುತ್ತಾರೆ ಎಂಬುದು ಅರ್ಥ ಎಂದು ದೇವನೂರು ಪತ್ರದಲ್ಲಿ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ಬಗ್ಗೆಯೂ ದೇವನೂರು ಮಹದೇವ ಅಸಮಾಧಾನ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ