ಇಸ್ಲಾಮಾಬಾದ್ : ಪಾಕಿಸ್ತಾನದ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಇಮ್ರಾನ್ ಖಾನ್ ಅವರಿಗೆ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲವಾಲ್ ಭಟ್ಟೊ ಜರ್ದಾರಿ ಅವರು 24 ಗಂಟೆಗಳ ಗಡುವನ್ನು ನೀಡಿದ್ದಾರೆ.
ದೇಶದಲ್ಲಿ ಇಮ್ರಾನ್ ಖಾನ್ ಅವರ ಆಡಳಿತ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಅಸಮಾಧಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜೀನಾಮೆಗೆ ಜರ್ದಾರಿ ಆಗ್ರಹಿಸಿದ್ದಾರೆ. ಇಮ್ರಾನ್ ಖಾನ್ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಡುವಿನ ಆಪಾದಿತ ಸಂಬಂಧವನ್ನು ಜರ್ದಾರಿ ಉಲ್ಲೇಖಿಸಿದ್ದಾರೆ.
ದೇಶವು ಸರ್ಕಾರದ ಆರ್ಥಿಕ ನೀತಿಗಳನ್ನು ತಿರಸ್ಕರಿಸಿದೆ. ಪಿಟಿಐಎಂಎಫ್ (ಪಿಟಿಐ+ಐಎಂಎಫ್) ವಿರುದ್ಧ ಪ್ರತಿಭಟನೆಗಳಾಗುತ್ತಿವೆ ಎಂದು ಜರ್ದಾರಿ ತಿಳಿಸಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಕೈಗೊಂಬೆ ಎಂದು ಟೀಕಿಸಿರುವ ಜರ್ದಾರಿ ಅವರು, ಸಾಮಾನ್ಯ ಜನರು ಹಣದುಬ್ಬರದ ಸುನಾಮಿಯಲ್ಲಿ ಮುಳುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇಮ್ರಾನ್ ಖಾನ್ ಸರ್ಕಾರ ಸಾಲಕ್ಕಾಗಿ ಭಿಕ್ಷೆ ಬೇಡುತ್ತಿದೆ.
ಜನರು ಇನ್ನು ಮುಂದೆ ಸರ್ಕಾರದವರು ಮಾಡಿರುವ ಪ್ರಮಾದಗಳನ್ನು ಹೊರೆಯನ್ನು ಹೊರಲು ಸಾಧ್ಯವಿಲ್ಲ. ಇಮ್ರಾನ್ ಅವರು ಕಂಬಿಗಳ ಹಿಂದೆ ಇರುವುದು ಸರಿ. ವಿದೇಶಿ ಹಣದ ಪ್ರಕರಣದಲ್ಲಿ ಅವರನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.