ಗುಜರಾತ್ ಸಿಎಂ ಆಯ್ಕೆ : ಬಿಜೆಪಿಗೆ ಆರ್‌ಎಸ್ಎಸ್‌ ಸಲಹೆ ಏನು?

ಬುಧವಾರ, 3 ಆಗಸ್ಟ್ 2016 (13:14 IST)
ಆನಂದಿ ಬೆನ್ ಅವರ ರಾಜೀನಾಮೆಯಿಂದ ತೆರವಾಗಿರುವ ಗುಜರಾತ್ ಸಿಎಂ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲ ದೇಶಾದ್ಯಂತ ಮನೆ ಮಾಡಿದ್ದು ಈ ಕುರಿತು ನಿರ್ಧರಿಸಲು ಬಿಜೆಪಿಯ ಸಂಸದೀಯ ಮಂಡಳಿ 7 ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸದಲ್ಲಿ ಸಭೆ ನಡೆಸಿದೆ.

ಕೇಂದ್ರ ಸಚಿವ ಪುರುಷೋತ್ತಮ್ ರೂಪಾಲಾ, ಗುಜರಾತ್ ಸಂಪುಟ ದರ್ಜೆ ಸಚಿವ ನಿತಿನ್ ಪಟೇಲ್, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿಯ್ ರೂಪಾನಿ, ವಿಧಾನಸಭಾ ಸ್ಪೀಕರ್ ಗಣಪತಿ  ವಾಸವ್  ಮುಖ್ಯಮಂತ್ರಿ ಪದವಿಯ ರೇಸ್‌ನಲ್ಲಿದ್ದಾರೆ. ಮೂಲಗಳ ಪ್ರಕಾರ ವಿಜಯ್ ರೂಪಾನಿ  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಆಯ್ಕೆಯಾಗಿದ್ದಾರೆ.  ಹೀಗಾಗಿ ಅವರೇ ಗುಜರಾತ್ ಸಿಎಂ ಆಗುವ ಲಕ್ಷಣಗಳು ದಟ್ಟವಾಗಿವೆ. ಆದರೆ ಸಿಎಂ ಆಯ್ಕೆ ಮಾಡುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಆರ್‌ಎಸ್ಎಸ್ ಬಿಜೆಪಿಗೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.

ಗುಜರಾತ್ ಚುನಾವಣೆ ಉತ್ತರ ಪ್ರದೇಶಕ್ಕಿಂತ ದೊಡ್ಡ ಚುನಾವಣಾ ಕಾಳಗವಾಗಿದ್ದು,ರಾಜ್ಯದಲ್ಲಿ ಕಳೆದುಕೊಳ್ಳುತ್ತಿರುವ ಹಿಡಿತವನ್ನು ಮರಳಿ ಗಳಿಸಲು ಪಕ್ಷದ ವರಿಷ್ಠರು ಕಾರ್ಯಪ್ರವೃತ್ತರಾಗಬೇಕು. ಇದನ್ನು ಗಮನದಲ್ಲಿರಿಸಿಕೊಂಡು ಪ್ರಬಲ ಮತ್ತು ನಿರ್ಣಾಯಕ ನಾಯಕತ್ವದ ವ್ಯಕ್ತಿಯನ್ನು ಸಿಎಂ ಆಗಿ ಆಯ್ಕೆ ಮಾಡಬೇಕು ಎಂದು ಸಂಘ ಬಿಜೆಪಿಗೆ ಸಲಹೆ ನೀಡಿದೆ.

ಆದರೂ ಆನಂದಿಬೆನ್‌ ಪಟೇಲ್‌ ಅವರ ಉತ್ತರಾಧಿಕಾರಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ