ಜಯಲಲಿತಾ ಪಕ್ಷಕ್ಕೆ ಆದ ಗತಿಯೇ ಕರುಣಾನಿಧಿ ಪಕ್ಷಕ್ಕೂ ಆಗುತ್ತಾ?
ಮಂಗಳವಾರ, 14 ಆಗಸ್ಟ್ 2018 (10:08 IST)
ಚೆನ್ನೈ: ಜೆ. ಜಯಲಲಿತಾ ತೀರಿಕೊಂಡ ಬಳಿಕ ಎಐಎಡಿಎಂಕೆ ಪಕ್ಷದೊಳಗೆ ಶಶಿಕಲಾ ನಟರಾಜನ್ ಮತ್ತು ಪನೀರ್ ಸೆಲ್ವಂ ನಡುವಿನ ಹೋರಾಟದ ಫಲವಾಗಿ ಪಕ್ಷ ಇಬ್ಬಾಗವಾಗಿದೆ. ಈಗ ಡಿಎಂಕೆ ಸ್ಥಿತಿಯೂ ಅದೇ ಆಗುವ ಹಂತದಲ್ಲಿದೆ.
ಎಂ ಕರುಣಾನಿಧಿ ಇಹಲೋಕ ತ್ಯಜಿಸಿ ಇನ್ನೂ ವಾರವಾಗುವ ಮೊದಲೇ ಪಕ್ಷದೊಳಗೆ ಅವರ ಇಬ್ಬರು ಪುತ್ರರ ನಡುವೆ ಅಧಿಕಾರಕ್ಕಾಗಿ ಕಚ್ಚಾಟ ತಾರಕಕ್ಕೇರಿದೆ.
ಎಂಕೆ ಅಳಗಿರಿ ಮತ್ತು ಎಂಕೆ ಸ್ಟಾಲಿನ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದು, ಪಕ್ಷದ ಸೂತ್ರ ತಮ್ಮದೇ ಎಂದು ಇಬ್ಬರೂ ಕಚ್ಚಾಡುತ್ತಿದ್ದಾರೆ. ಎಂಕೆ ಸ್ಟಾಲಿನ್ ಗೆ ಕರುಣಾನಿಧಿಯ ಬಲವಿತ್ತು. ಹೀಗಾಗಿಯೇ ಅವರು ತಾವೇ ಮುಂದಿನ ಡಿಎಂಕೆ ನೇತಾರ ಎನ್ನುತ್ತಿದ್ದಾರೆ. ಆದರೆ ಅಳಗಿರಿ ನನ್ನ ಬಳಿ ಕರುಣಾನಿಧಿಯ ನಿಜವಾದ ಬೆಂಬಲಿಗರಿದ್ದಾರೆ. ನಾನೇ ಮುಖ್ಯಸ್ಥ ಎನ್ನುತ್ತಿದ್ದಾರೆ.
ಇದರ ನಡುವೆ ಅಳಗಿರಿ ಮತ್ತು ಬೆಂಬಲಿಗರನ್ನು ಪಕ್ಷದಿಂದ ಸ್ಟಾಲಿನ್ ವಜಾಗೊಳಿಸಿದ್ದು, ಮತ್ತೊಂದು ಆಂತರಿಕ ಕಲಹಕ್ಕೆ ಕಾರಣವಾಗಿದೆ. ನಿನ್ನೆ ಕರುಣಾನಿಧಿ ಸಮಾಧಿಗೆ ಭೇಟಿ ನೀಡಿದ ಅಳಗಿರಿ ಹೋರಾಟದ ಸೂಚನೆ ನೀಡಿದ್ದಾರೆ. ಇದು ತಮಿಳುನಾಡನ್ನು ಮತ್ತೊಮ್ಮೆ ರಾಜಕೀಯ ಕದನದ ವೇದಿಕೆಯಾಗಿಸುವ ಲಕ್ಷಣ ಕಾಣಿಸುತ್ತಿದೆ. ಈ ಪರಿಸ್ಥಿತಿ ಲಾಭ ಪಡೆಯಲು ಈಗಷ್ಟೇ ಪಕ್ಷ ಸ್ಥಾಪಿಸಿರು ಕಮಲ್ ಹಾಸನ್, ತಮಿಳುನಾಡಿನಲ್ಲಿ ತನ್ನದೇ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಗೆ ವರವಾಗುವುದೇ ಎನ್ನುವುದನ್ನು ಬರುವ ದಿನಗಳಲ್ಲಿ ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.