10 ವರ್ಷಗಳ ಹಿಂದೆ ಬಿಪಿಎಲ್ ಕಾರ್ಡ್ ಹೊಂದಿದ್ದ ಮಾಜಿ ಸಚಿವ ಇಂದು ನೂರಾರು ಕೋಟಿ ರೂ. ಒಡೆಯ

ಬುಧವಾರ, 14 ಸೆಪ್ಟಂಬರ್ 2016 (15:40 IST)
ಕಳೆದ 10 ವರ್ಷಗಳ ಹಿಂದೆ ಬಿಪಿಎಲ್ ಕಾರ್ಡ್ ಹೊಂದಿದ್ದ ಉತ್ತರಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ, ಇದೀಗ ನೂರಾರು ಕೋಟಿ ರೂಪಾಯಿಗಳ ಆಸ್ತಿಯ ಒಡೆಯರಾಗಿರುವುದು ಆಘಾತ ಮೂಡಿಸಿದೆ.
 
ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ತವರು ಕ್ಷೇತ್ರವಾದ ಅಮೇಥಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಿ ಗಣಿ ಇಲಾಖೆ ಸಚಿವರಾಗಿರುವ ಪ್ರಜಾಪತಿ ಮತ್ತು ಮತ್ತೊಬ್ಬ ಸಚಿವ ರಾಜ್ ಕಿಶೋರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಭ್ರಷ್ಟಾಚಾರ, ಭೂ ಕಬಳಿಕೆ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ವಜಾಗೊಳಿಸಿದ್ದಾರೆ. 
 
ಅಮೇಥಿ ಮೂಲಗಳ ಪ್ರಕಾರ, ಕಳೆದ 2002ರಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದ ಪ್ರಜಾಪತಿ, 2012ರ ಚುನಾವಣೆಯಲ್ಲಿ 1.83 ಕೋಟಿ ರೂಪಾಯಿಗಳ ಆಸ್ತಿಯ ವಿವರ ಘೋಷಿಸಿಕೊಂಡಿದ್ದಾರೆ. ಆದರೆ, ಸ್ಥಳೀಯ ಮೂಲಗಳ ಪ್ರಕಾರ ಪ್ರಜಾಪತಿ ನೂರಾರು ಕೋಟಿ ರೂಪಾಯಿಗಳ ಮಾಲೀಕನಾಗಿದ್ದಾನೆ ಎಂದು ತಿಳಿಸಿದ್ದಾರೆ.
 
ಸಾಮಾಜಿಕ ಕಾರ್ಯಕರ್ತೆಯಾದ ನೂತನ್ ಠಾಕೂರ್, ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಲಕ್ನೋ ಮತ್ತು ಅಮೇಥಿಯಲ್ಲಿ ಪ್ರಜಾಪತಿ ಮತ್ತು ಆತನ ಕುಟುಂಬದವರು ಹಲವು ಕಂಪೆನಿಗಳನ್ನು ಹೊಂದಿದ್ದು, ನೂರಾರು ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
 
ಪ್ರತಾಪ್ ಗಢ್ ಜಿಲ್ಲೆಯ ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತರೊಬ್ಬರು, ಮಾಜಿ ಸಚಿವ ಪ್ರಜಾಪತಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಅಂದಾಜು 300 ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ