ತಮಿಳುನಾಡು ಜನರ ಪಾಲಿನ ಅಮ್ಮ ಜಯಲಲಿತಾ ಹೃದಯಾಘಾತದಿಂದ ನಿಧನರಾದ ಬಳಿಕ ರಾಜ್ಯ ರಾಜಕಾರಣ ದಿನೇ ದಿನೇ ಕುತೂಹಲವನ್ನು ಕೆರಳಿಸುತ್ತಿದೆ. ಜಯಾ ಪರಮಾಪ್ತ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿ ಕಾರ್ಯಭಾರ ನಡೆಸುತ್ತಿದ್ದಾರೆ. ಆದರೆ ಅವಿರೋಧವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜಯಾ ಆಪ್ತ ಗೆಳತಿ ಶಶಿಕಲಾ ನಟರಾಜನ್ ರಾಜ್ಯದ ಗದ್ದುಗೆ ಏರಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿದೆ.
ಇತ್ತ, ತಮಿಳುನಾಡು ಸರ್ಕಾರದ ಚುಕ್ಕಾಣಿ ಹಿಡಿಯುವ ಸಲುವಾಗಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಪಕ್ಷದ ಬೆಂಬಲ ಪಡೆಯುವಲ್ಲಿ ನಿರತರಾದ ಬೆನ್ನಲ್ಲೇ, ಅವರಿಗೆ ಸೆಡ್ಡು ಹೊಡೆಯಲು ಜಯಲಲಿತಾ ಅವರ ಸೋದರನ ಮಗಳು ದೀಪಾ ಜಯಕುಮಾರ್ ಸಿದ್ಧತೆ ನಡೆಸಿದ್ದಾರೆ. ಎಐಎಡಿಎಂಕೆ ಪಕ್ಷದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ರಾಜಕೀಯ ಪ್ರವೇಶಿಸಲು ದೀಪಾ ನಿರ್ಧರಿಸಿದ್ದಾರೆ.