ಸುಪ್ರೀಂಗೆ ಕಾವೇರಿ ನ್ಯಾಯ ಮಂಡಳಿ ರಚನೆ ಆದೇಶ ನೀಡುವ ಅಧಿಕಾರವಿಲ್ಲ: ಕೇಂದ್ರ

ಸೋಮವಾರ, 3 ಅಕ್ಟೋಬರ್ 2016 (17:03 IST)
ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ನಿರ್ದೇಶನ ನೀಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇಲ್ಲ ಎಂದು ಕೇಂದ್ರ ಮಾರ್ಪಾಡು ಅರ್ಜಿ ಸಲ್ಲಿಸಿದೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕೊನೆಗೂ ರಾಜ್ಯದ ಪರ ನಿಂತಿರುವ ಕೇಂದ್ರ ಸರ್ಕಾರ, ಮಂಡಳಿ ರಚನೆ ಆದೇಶ ನೀಡುವುದು ನಿಮ್ಮ ವ್ಯಾಪ್ತಿಯಲ್ಲಿ ಇಲ್ಲ. ಈ ಆದೇಶವನ್ನು ಪಾಲಿಸಲು ಹೋದರೆ ಮತ್ತೊಂದು ಸಮಸ್ಯೆ ಉದ್ಭವವಾಗುತ್ತದೆ ಎಂದು ಸುಪ್ರೀಂಗೆ ಹೇಳಿದೆ.
 
ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ಮತ್ತು ಕಾವೇರಿ ನ್ಯಾಯ ಮಂಡಳಿ ರಚನೆ ಆದೇಶ 2012ರ ರಾಷ್ಟ್ರೀಯ ಜಲ ನೀತಿಯ ಉಲ್ಲಂಘನೆಗೆ ಕಾರಣವಾಗುತ್ತದೆ. ಈ ವಿಧಿಯ ಪ್ರಕಾರ ತಮಿಳುನಾಡಿಗೆ ಕೃಷಿಗೆ ನೀರು ಒದಗಿಸುವುದಕ್ಕಿಂತ ಮೊದಲು ಕರ್ನಾಟಕಕ್ಕೆ ಕುಡಿಯುವ ನೀರಿನ ಪೂರೈಕೆಗೆ ಪ್ರಾಧಾನ್ಯತೆ ನೀಡಬೇಕು ಎಂದು ಹೇಳುತ್ತದೆ ಎಂದು ಶನಿವಾರ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಕೂಡ ಕರ್ನಾಟಕದ ಪರ ನಿಂತಿದೆ. 
 
ಸೆಪ್ಟೆಂಬರ್ 30 ರಂದು ನಡೆದ ವಿಚಾರಣೆಯಲ್ಲಿ ಕೇವಲ ನಾಲ್ಕು ದಿನಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು. ಅದಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಕೂಡಲೇ ಒಪ್ಪಿಗೆ ಸೂಚಿಸಿದ್ದರು.
 
ಆದರೆ ಅಂದು ತನ್ನಿಂದ ತಪ್ಪಾಗಿತ್ತು. ಸಂವಿಧಾನದ ಅಂತರ್ ರಾಜ್ಯ ಜಲ ವಿವಾದ ಕಾಯಿದೆ ಪ್ರಕಾರ ಸಂಸತ್‌ನ ಉಭಯ ಸದನಗಳು ಅನುಮೋದನೆ ನೀಡದೇ ನಿರ್ವಹಣಾ ಮಂಡಳಿಯನ್ನು ರಚನೆ ಮಾಡುವಂತೆ ಇಲ್ಲ. ಜತೆಗೆ ಅಂತರ್ ರಾಜ್ಯ ಜಲವಿವಾದವನ್ನು ಬಗೆ ಹರಿಸಲು ನಿಮಗೆ ಯಾವುದೇ ಅಧಿಕಾರ ಇಲ್ಲ ಎಂದು ಅಟಾರ್ನಿ ಜನರಲ್ ಇಂದು ಸುಪ್ರೀಂ ಮುಂದೆ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ