ಖಾಲಿಸ್ತಾನ ಪರ ಬೆಂಬಲಿಗರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಭಾರತದ ರಾಯಭಾರ ಮೇಲೆ ದಾಳಿ ಮಾಡಿರುವುದರಿಂದ, ಮತ್ತೆ ಪ್ರತಿಭಟನೆಗಳು ನಡೆಯಬಹುದು ಎಂಬ ವರದಿ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಕಚೇರಿಗೆ ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೊ ಪೊಲೀಸ್ ಡಿಪಾರ್ಟ್‌ಮೆಂಟ್‌ನ ವಿಶೇಷ ದಳದವರು ಭದ್ರತೆ ಕೈಗೊಂಡಿದ್ದಾರೆ. ಖಾಲಿಸ್ತಾನ ಪರ ಘೋಷಣೆ ಕೂಗುತ್ತಾ ಕಾನ್ಸುಲೇಟ್ ಕಚೇರಿಗೆ ನುಗ್ಗಿದ್ದ ಪ್ರತಿಭಟನಾಕಾರರು, ಕಚೇರಿ ಆವರಣದಲ್ಲಿ ಖಾಲಿಸ್ತಾನ ಧ್ವಜವನ್ನು ಹಾರಿಸಲು ಯತ್ನಿಸಿದ್ದರು. ನಂತರ ಕಬ್ಬಿಣದ ರಾಡು ಬಳಸಿ ಕಚೇರಿಯ ಬಾಗಿಲು ಮತ್ತು ಕಿಟಕಿಗಳನ್ನು ಒಡೆದಿದ್ದರು. ಪಂಜಾಬಿ, ಹಿಂದಿಯಲ್ಲಿ ಖಾಲಿಸ್ತಾನ ಪರ ಘೋಷಣೆ ಕೂಗಿದ್ದ ಉದ್ರಿಕ್ತರು ಪಂಜಾಬ್‌ನಲ್ಲಿ ಪೊಲೀಸರು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಘಟನೆಯು ಖಂಡಿತ ಸ್ವೀಕಾರಾರ್ಹ ಅಲ್ಲವೇ ಅಲ್ಲ. ರಾಜತಾಂತ್ರಿಕ ಅಧಿಕಾರಿಗಳು ಮತ್ತು ಅಲ್ಲಿನ ಸೌಕರ್ಯಗಳ ರಕ್ಷಣೆಗೆ ನಾವು ಬದ್ಧ ಎಂದು ಶ್ವೇತಭವನದ ಸಂವಹನ ಕಾರ್ಯತಂತ್ರದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಮನ್ವಯಾಧಿಕಾರಿ ಜಾನ್ ಕಿರ್ಬಿ ಅವರು ತಿಳಿಸಿದ್ದರು. ಹಿಂಸಾಚಾರ ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಿಸಿ ಪಂಜಾಬ್ ಸರ್ಕಾರವು ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಅಮೃತ್ ಪಾಲ್‌ಸಿಂಗ್ ಬಂಧನಕ್ಕೆ ಕಾರ್ಯಾಚರಣೆ ಶುರುಮಾಡಿರುವುದೇ ಭಾರತದ ರಾಯಭಾರ ಕಚೇರಿ ಮೇಲೆ ದಾಳಿ ಮಾಡಲು ಕಾರಣ ಎನ್ನಲಾಗುತ್ತಿದೆ.