ಮಕ್ಕಳನ್ನು ಹೆತ್ತಿರುವ, ಪೋಷಿಸುತ್ತಿರುವ ಪೋಷಕರು ಎಚ್ಚೆತ್ತುಕೊಳ್ಳಲೇ ಬೇಕಾದ ಸಮಯವಿದು. ದೇಶದಲ್ಲಿ ಬಾಲಾಪರಾಧಗಳು ಮೀತಿಮೀರಿದ್ದು ಕೊಲೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿವೆ. ಇತ್ತೀಚಿಗೆ ದೆಹಲಿಯಲ್ಲಿ ನಡೆದ ಪ್ರಕರಣವೊಂದು ದೇಶವನ್ನೇ ಬೆಚ್ಚಿ ಬೀಳಿಸಿದೆ. 7 ವರ್ಷದ ಪುಟ್ಟ ಮಗುವಿನ ಮೇಲೆ ಆಕೆಯ ಸೀನಿಯರ್ಸ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಆರೋಪಿಗಳು ಹುಡುಗರು ಎಂದು ನೀವಂದುಕೊಂಡರೆ ಅದು ತಪ್ಪು. ಈ ಪ್ರಕರಣದ ಆರೋಪಿಗಳು ಮತ್ತು ಪೀಡಿತೆ ಇಬ್ಬರು ಬಾಲಕಿಯರೇ.
ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ಪ್ರಕಟವಾಗಿರುವ ಸುದ್ದಿಯ ಪ್ರಕಾರ, ಮೋತಿನಗರ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎರಡನೆಯ ತರಗತಿಯ ಬಾಲಕಿಯ ಮೇಲೆ ಅದೇ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ.
ತನ್ನ ಸೀನಿಯರ್ಸ್‌ಗಳಿಂದಾಗುತ್ತಿರುವ ಶೋಷಣೆ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ವಿವರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ, ಮತ್ತೀಗ ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಗಳ ವಿರುದ್ಧ ಐಪಿಸಿ ವಿಭಾಗ 328, 34 ಮತ್ತು ಪೋಸ್ಕೋ ಕಾಯಿದೆಯಡಿಯಲ್ಲಿ ದೂರು ದಾಖಲಾಗಿದೆ.