600ಕ್ಕೂ ಹೆಚ್ಚು ಬಾಲಕಿಯರನ್ನು ಗುರಿಯಾಗಿಸಿದ ಸರಣಿ ಶಿಶುಕಾಮಿ ಅರೆಸ್ಟ್

ಸೋಮವಾರ, 16 ಜನವರಿ 2017 (10:19 IST)
ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರಗೈದ ಆರೋಪವನ್ನೆದುರಿಸುತ್ತಿದ್ದ ಸರಣಿ ಅತ್ಯಾಚಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈತ 600ಕ್ಕೂ ಹೆಚ್ಚು ಬಾಲೆಯರನ್ನು ಗುರಿಯನ್ನಾಗಿಸಿದ್ದ ಎಂದು ತಿಳಿದು ಬಂದಿದೆ. 

38 ವರ್ಷದ ಮಹಾಕಾಮಿ ಸುನಿಲ್ ರಸ್ತೋಗಿ ವೃತ್ತಿಯಲ್ಲಿ ಟೈಲರ್‌ ಆಗಿದ್ದು ಪೂರ್ವದೆಹಲಿಯ ಕೊಂಡ್ಲಿಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. 
 
ಸುನಿಲ್ 7 ರಿಂದ 11ವರ್ಷದೊಳಗಿನ ಬಾಲಕಿಯನ್ನು ಗುರಿಯಾಗಿಸಿ ಕೀಚಕ ಕೃತ್ಯವನ್ನೆಸಗುತ್ತಿದ್ದ. ಕೇವಲ ರಾಷ್ಟ್ರ ರಾಜಧಾನಿಯಲ್ಲಷ್ಟೇ ಅಲ್ಲದೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಕೂಡ ಈತ ತನ್ನ ಕಾಮುಕತನವನ್ನು ಮೆರೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
 
ತನ್ನ ತಪ್ಪನ್ನು ಒಪ್ಪಿಕೊಂಡಿರುವ ಆರೋಪಿ ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಲೈಂಗಿಕ ತೃಪ್ತಿ ಪಡೆಯುತ್ತಿದ್ದೆ. ಶಾಲೆಯಿಂದ ಮನೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯರನ್ನು ಮಾತ್ರ ಗುರಿಯಾಗಿಸುತ್ತಿದ್ದೆ. ನಿಮ್ಮ ತಂದೆ ಕೆಲ ಬಟ್ಟೆ ಮತ್ತು ಸಾಮಾನುಗಳನ್ನು ಕೊಟ್ಟಿದ್ದಾರೆ ಎಂದು ನಂಬಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗುತ್ತಿದ್ದೆ, ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. 
 
2004ರಲ್ಲಿ ಪ್ರಥಮ ಬಾರಿ ಕೀಚಕ ಕೃತ್ಯವನ್ನು ಮೆರೆದಿದ್ದ ಆತನಿಗೆ ಐವರು ಮಕ್ಕಳಿದ್ದಾರೆ. ಅದರಲ್ಲಿ ಇಬ್ಬರು ಹೆಣ್ಣುಮಕ್ಕಳು. 
 
ಈ ಹಿಂದೆ ರುದ್ರಾಪುರ ಮತ್ತು ಉತ್ತರಾಖಂಡ್‌ನಲ್ಲು ಕೂಡ ಆತ ಜೈಲುವಾಸವನ್ನನುಭವಿಸಿದ್ದ. 
 
ಡಿಸೆಂಬರ್ 13 ರಂದು ಈತ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ್ದ. ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿದ್ದರೂ ಅದರಲ್ಲಿ ಆತನ ಗುರುತು ಪತ್ತೆಯಾಗಿರಲಿಲ್ಲ. ಪೀಡಿತ ಬಾಲಕಿ ಮತ್ತು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಆತನನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ