ಕೇಜ್ರಿವಾಲ್‌ಗೆ ಸುಪ್ರೀಂನಲ್ಲಿ ಹಿನ್ನಡೆ: ಮಧ್ಯಂತರ ಜಾಮೀನು ಅರ್ಜಿಯ ತುರ್ತು ವಿಚಾರಣೆಗೆ ನಕಾರ

Sampriya

ಮಂಗಳವಾರ, 28 ಮೇ 2024 (14:33 IST)
ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ, ಜಾಮೀನಿನ ಮೇಲೆ ಹೊರಬಂದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮಧ್ಯಂತರ ಜಾಮೀನು ಅವಧಿಯನ್ನು ಮತ್ತಷ್ಟು ವಿಸ್ತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಈ ಮೂಲಕ ಕೇಜ್ರಿವಾಲ್‌ ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಜಾರಿ ನಿರ್ದೇಶನಾಲಯದಿಂದ ಮಾರ್ಚ್ 21ರಂದು ಬಂಧಿಸಲ್ಪಟ್ಟಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಏಳು ಹಂತದ ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವಾದ ಜೂನ್ 1ರವರೆಗೆ ಜಾಮೀನು ಸಿಕ್ಕಿತು. ಇದೀಗ ತಮ್ಮ ಆರೋಗ್ಯ ಸಮಸ್ಯೆಯ ಕಾರಣ ನೀಡಿ ಜಾಮೀನು ಅವಧಿಯನ್ನು ಮತ್ತಷ್ಟು ದಿನ ವಿಸ್ತರಿಸುವಂತೆ ಕೋರಿ ಕೇಜ್ರಿವಾಲ್‌ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಕೆ.ವಿ ವಿಶ್ವನಾಥನ್‌ ಇದ್ದ ನ್ಯಾಯಪೀಠ, ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ್ದು, ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮುಂದಿನ ದಿನಗಳಲ್ಲಿ ನಡೆಸಲಿದ್ದಾರೆ ಎಂದು ಹೇಳಿದೆ. ಅಲ್ಲದೇ ಈ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರಿಗೆ ಹಸ್ತಾಂತರಿಸಿದೆ. ಹೀಗಾಗಿ ಜಾಮೀನು ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಕೇಜ್ರಿವಾಲ್‌ ಜೂ.2ರಂದು ತಿಹಾರ್‌ ಜೈಲಿಗೆ ಮರಳಬೇಕಾಗಿದೆ.

ದೆಹಲಿ ಸಚಿವೆ ಆತಿಶಿ ಅವರು ಸೋಮವಾರವಷ್ಟೇ ಅರವಿಂದ್‌ ಕೇಜ್ರಿವಾಲ್‌ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿದ್ದರು. ಕೇಜ್ರಿವಾಲ್‌ ಅವರ ಕೇಟೊನ್‌ ಪ್ರಮಾಣವು ಜಾಸ್ತಿಯಾಗಿದೆ. ಏಕಾಏಕಿ ತೂಕ ಕಡಿಮೆಯಾಗುವುದು, ಜಾಸ್ತಿಯಾಗುವುದನ್ನು ನೋಡಿದರೆ ಅವರಿಗೆ ಗಂಭೀರ ಕಾಯಿಲೆ ಇರುವ ಸಾಧ್ಯತೆ ಇದೆ. ಕಿಡ್ನಿ ಸಮಸ್ಯೆ ಅಥವಾ ಕ್ಯಾನ್ಸರ್‌ ಸೇರಿ ಯಾವುದೇ ಗಂಭೀರ ಕಾಯಿಲೆ ಇರಬಹುದು. ಹಾಗಾಗಿ, ಅರವಿಂದ್‌ ಕೇಜ್ರಿವಾಲ್‌ ಅವರು ಜೂನ್‌ 2ರಂದು ಜೈಲಿಗೆ ಹೋಗುವ ಬದಲು ಜೂನ್‌ 9ರಂದು ತೆರಳುವ ಕುರಿತು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ ಆತಿಶಿ ತಿಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ