ಅವಿವಾಹಿತೆ ಪುತ್ರಿ ಗರ್ಭವತಿ: ಕತ್ತು ಹಿಸುಕಿ ಕೊಂದ ತಾಯಿ

ಸೋಮವಾರ, 18 ಜುಲೈ 2016 (13:12 IST)
ಆಘಾತಕಾರಿ ಘಟನೆಯೊಂದರಲ್ಲಿ ಮರ್ಯಾದೆ ಹತ್ಯೆ ಪ್ರಕರಣ ಮಹಾರಾಷ್ಟ್ರದ ನಾಗ್ಪುರ್‌ದಲ್ಲಿ ವರದಿಯಾಗಿದೆ. 45 ವರ್ಷದ ಮಹಿಳೆಯೊಬ್ಬಳು ತನ್ನ 19 ವರ್ಷ ವಯಸ್ಸಿನ ಅವಿವಾಹಿತ ಗರ್ಭವತಿ ಪುತ್ರಿಯನ್ನು ಹತ್ಯೆಗೈದಿದ್ದಾಳೆ. 
 
ಮುಕ್ತಾಬಾಯಿ ಎನ್ನುವ ಮಹಿಳೆಗೆ ತನ್ನ ಪುತ್ರಿ ಅದೇ ಪ್ರದೇಶದಲ್ಲಿ ವಾಸವಾಗಿರುವ ಯುವಕನೊಂದಿಗೆ ಸಂಬಂಧ ಹೊಂದಿದ್ದು ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ ಎನ್ನುವುದು ಗೊತ್ತಾಗಿದೆ.
 
ಕುಟುಂಬದ ಘನತೆ ಗೌರವಕ್ಕೆ ಧಕ್ಕೆ ಬರುತ್ತದೆ ಎನ್ನುವ ಕಾರಣಕ್ಕೆ ಮಹಿಳೆ ಮುಕ್ತಾಬಾಯಿ, ತನ್ನ ಪುತ್ರಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾಳೆ. ಆದರೆ, ಪುತ್ರಿ ಗರ್ಭಪಾತ ಮಾಡಿಸಿಕೊಳ್ಳಲು ನಿರಾಕರಿಸಿದ್ದಾಳೆ. ಇದರಿಂದ, ಮುಕ್ತಾಬಾಯಿ ಪುತ್ರಿಯನ್ನು ಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ.  
 
ಆರೋಪಿ ಮಹಿಳೆ ಮುಕ್ತಾಬಾಯಿ ದುಪ್ಪಟ್ಟಾದಿಂದ ಪುತ್ರಿಯ ಕತ್ತು ಹಿಸುಕಿ ಕೊಂದು ಹಾಕಿದ್ದಾಳೆ. ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿ, ಕುಟುಂಬದವರ ನೆರವಿನಿಂದ ಮೃತ ಪುತ್ರಿಯ ಅಂತ್ಯಸಂಸ್ಕಾರ ಮಾಡಲು ಪ್ರಯತ್ನಿಸಿದ್ದಾಳೆ. 
 
ಕೆಲ ಅಪರಿಚಿತ ವ್ಯಕ್ತಿಗಳು ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ, 19 ವರ್ಷದ ಬಾಲಕಿ ಸಾವ ಅನುಮಾನಾಸ್ಪದವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ಕೂಡಲೇ ಘಟನಾ ಸ್ಥಳಕ್ಕೆ ತೆರಳಿದ ಮಹಿಳಾ ಪೊಲೀಸ್ ಅಧಿಕಾರಿ ಎಸ್.ಕುಟೆಮಟೆ ನೇತೃತ್ವದ ತಂಡ ಆರೋಪಿ ಮಹಿಳೆಯ ಮುಕ್ತಾಬಾಯಿಯನ್ನು ಬಂಧಿಸಿ, ಬಾಲಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. 
 
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಗರ್ಭವತಿಯಾಗಿದ್ದು, ಆಕೆಯನ್ನು ಕತ್ತುಹಿಸುಕಿ ಸಾಯಿಸಲಾಗಿದೆ ಎನ್ನುವ ವರದಿ ಬಂದಿದೆ. 
 
ಪೊಲೀಸರು ಆರೋಪಿ ಮುಕ್ತಾಬಾಯಿಯನ್ನು ತೀವ್ರವಾಗಿ ವಿಚಾರಣೆಗೊಳಿಸಿದಾಗ, ತಾನೇ ಪುತ್ರಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ