ನವದೆಹಲಿ: ಕೊರೋನಾ ತಡೆಗಟ್ಟಲು ನೀಡಲಾಗಿದ್ದ ಕೊವ್ಯಾಕ್ಸಿನ್ ಲಸಿಕೆಯಲ್ಲೂ ಅಡ್ಡಪರಿಣಾಮಗಳಿವೆ ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬನಾರಸ್ ಹಿಂದೂ ವಿವಿ ಈ ವಿಚಾರವನ್ನು ಹೊರಹಾಕಿತ್ತು.
ಇದಕ್ಕೆ ಮೊದಲು ಕೊವಿಶೀಲ್ಡ್ ವ್ಯಾಕ್ಸಿನ್ ನಿಂದ ರಕ್ತಹೆಪ್ಪುಗಟ್ಟುವಿಕೆ, ಹೃದಯಾಘಾತ ಮುಂತಾದ ಅಡ್ಡಪರಿಣಾಮಗಳಿವೆ ಎಂದು ಇದರ ತಯಾರಕ ಬ್ರಿಟನ್ ಮೂಲದ ಕಂಪನಿಯೇ ಒಪ್ಪಿಕೊಂಡಿತ್ತು. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಕೆಲವು ಆರೋಗ್ಯ ತಜ್ಞರು ಕೇವಲ ಕೆಲವೇ ಶೇಕಡಾದಷ್ಟು ಜನರಿಗೆ ಮಾತ್ರ ಅಡ್ಡಪರಿಣಾಮಗಳಾಗಬಹುದು ಎಂದಿತ್ತು.
ಇದೀಗ ಕೊವ್ಯಾಕ್ಸಿನ್ ಬಗ್ಗೆಯೂ ಅಂತಹದ್ದೇ ಸುದ್ದಿ ಬರುತ್ತಿದೆ. ಕೊವ್ಯಾಕ್ಸಿನ್ ಪಡೆದ ಒಂದು ವರ್ಷದ ಬಳಿಕ ಹಲವರಲ್ಲಿ ಅಡ್ಡಪರಿಣಾಮ ಕಂಡುಬರುತ್ತಿದೆ ಎಂದು ಬನಾರ್ ವಿವಿ ವರದಿ ಹೊರಹಾಕಿದೆ. ಇದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಬನಾರಸ್ ವಿವಿ ಉಲ್ಲೇಖಿಸಿರುವ ಅಡ್ಡಪರಿಣಾಮಗಳು ಏನೆಲ್ಲಾ ಗೊತ್ತಾ?
ಕೊವ್ಯಾಕ್ಸಿನ್ ಮುಖ್ಯವಾಗಿ ಹದಿಹರೆಯದವರ ಮೇಲೆ ಪರಿಣಾಮ ಬೀರಿದೆ. ಸ್ನಾಯು ಸೆಳೆತ, ಶ್ವಾಸಕೋಶದ ಸೋಂಕು, ಕೀಲು ನೋವು, ಚರ್ಮ ರೋಗ, ನರ ಸಂಬಂಧೀ ರೋಗಗಳು ಕಂಡುಬಂದಿವೆ. ಅಷ್ಟೇ ಅಲ್ಲದೆ, ಯುವತಿಯರಲ್ಲಿ ಮುಟ್ಟಿನ ಸಮಸ್ಯೆಗೂ ಕಾರಣವಾಗಿದೆ. ಇದೀಗ ಈ ಲಸಿಕೆಯ ಮತ್ತಷ್ಟು ಅಡ್ಡಪರಿಣಾಮಗಳ ಬಗ್ಗೆ ಅಧ್ಯಯನ ಮುಂದುವರಿದಿದೆ.