ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರ ನಿರಾಕರಿಸುವುದನ್ನು ವಿರೋಧಿಸಿ ವೈಎಸ್ಆರ್ ಕಾಂಗ್ರೆಸ್ ಇಂದು ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದೆ. ಕಾಂಗ್ರೆಸ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಸಹ ಬಂದ್‌ಗೆ ಬೆಂಬಲ ನೀಡಿವೆ. ಆಂಧ್ರಪ್ರದೇಶಕ್ಕೆ 10 ವರ್ಷ ವಿಶೇಷ ಸ್ಥಾನಮಾನ ನೀಡಬೇಕು ಎಂಬುವುದು ಪ್ರತಿಭಟನಾಕಾರರ ಬೇಡಿಕೆಯಾಗಿದೆ.
ಹೈದರಾಬಾದ್, ವಿಜಯವಾಡ, ತಿರುಮಲ, ವಿಶಾಖಪಟ್ಟಣ ಸೇರಿದಂತೆ 13 ಜಿಲ್ಲೆಗಳಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಶಾಲೆ–ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬಂದ್‌ಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಬಸ್ ಸಂಚಾರ ಸಹ ಸಂಪೂರ್ಣ ಸ್ಥಗಿತಗೊಂಡಿದೆ.
ತಿರುಪತಿಗೂ ಬಂದ್ ಬಿಸಿ ತಟ್ಟಿದ್ದು, ಭಕ್ತಾದಿಗಳೂ ಅಲ್ಲಿಂದ ಮರಳಲು ಪರದಾಡುತ್ತಿದ್ದಾರೆ. ರೈಲ್ವೆ ಸಂಚಾರವೂ ಬಂದ್ ಆಗುವ ಸಾಧ್ಯತೆ ಇದೆ.
ಚುನಾವಣೆ ಸಂದರ್ಭದಲ್ಲಿ ಬಿಜೆಪಿ- ಟಿಡಿಪಿ ಮೈತ್ರಿಕೂಟ ಆಂಧ್ರಕ್ಕೆ 5 ವರ್ಷಗಳ ಬದಲಿಗೆ 10 ವರ್ಷಗಳ ಕಾಲ ವಿಶೇಷ ಸ್ಥಾನಮಾನ ನೀಡುವುದಾಗಿ ಆಶ್ವಾಸನೆ ನೀಡಿತ್ತು. ಅಧಿಕಾರಕ್ಕೇರಿ 2 ವರ್ಷಗಳಾದರೂ ಈ ಭರವಸೆ ಈಡೇರಿಲ್ಲ. ವಿಶೇಷ ಸ್ಥಾನಮಾನ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಟಿಡಿಪಿ-ಬಿಜೆಪಿ ಮೈತ್ರಿಕೂಟದ ಸರ್ಕಾರ ವಿಫಲವಾಗಿದೆ. ಈ ಹಿಂದೆ ತಿರುಪತಿಯಲ್ಲಿ ನೀಡಿದ್ದ ಭರವಸೆಯನ್ನು ಪ್ರಧಾನಿ ಮೋದಿ ಮರೆತಂತಿದೆ ಎಂದು ವೈಎಸ್ ಆರ್ ಕಾಂಗ್ರೆಸ್ ಹೇಳಿದೆ.
ವಿರೋಧ ಪಕ್ಷಗಳ ಒತ್ತಡ ಹೆಚ್ಚುತ್ತಿದ್ದಂತೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಕುರಿತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಚಿಂತಿಸುತ್ತಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.