ಸ್ಟಿಂಗ್ ಆಪರೇಶನ್: ಸಿಬಿಐ ಕಚೇರಿಗೆ ಆಗಮಿಸಿದ ಉತ್ತರಾಖಂಡ ಸಿಎಂ ರಾವತ್

ಮಂಗಳವಾರ, 24 ಮೇ 2016 (10:51 IST)
ರಾಜಕೀಯ ಬಿಕ್ಕಟ್ಟು ವೇಳೆ ನಡೆದಿದ್ದ ಸ್ಟಿಂಗ್ ಆಪರೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೋಟಿಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ಸಿಬಿಐ ಕಚೇರಿಗೆ ಹಾಜರಾಗಿದ್ದಾರೆ.
 
ಸ್ಟಿಂಗ್ ಆಪರೇಶನ್ ಕುರಿತಂತೆ ಮಂಗಳವಾರದಂದು ಸಿಬಿಐ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸುವಂತೆ ಮುಖ್ಯಮಂತ್ರಿ ರಾವತ್‌ಗೆ ಕೋರಿತ್ತು. ಈ ಹಿನ್ನೆಲೆಯಲ್ಲಿ ರಾವತ್ ಇಂದು ವಿಚಾರಣೆಗಾಗಿ ಹಾಜರಾಗಿದ್ದಾರೆ.
 
ಉತ್ತರಾಖಂಡ್‌ನಲ್ಲಿ ಒಂಬತ್ತು ಬಂಡಾಯ ಶಾಸಕರು ಸಿಎಂ ರಾವತ್ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದರು. ಶಾಸಕರ ಮನವೊಲಿಕೆಗಾಗಿ ಸ್ಟಿಂಗ್ ಆಪರೇಶನ್ ನಡೆಸಿದ್ದಾರೆ ಎಂದು ಬಿಜೆಪಿ ಸ್ಟಿಂಗ್ ಆಪರೇಶನ್‌ನ ವಿಡಿಯೋ ಬಿಡುಗಡೆ ಮಾಡಿದ್ದರಿಂದ ರಾಜಕೀಯ ಕೋಲಾಹಲ ಸೃಷ್ಟಿಯಾಗಿತ್ತು.
 
ಮುಖ್ಯಮಂತ್ರಿ ಹರೀಶ್ ರಾವತ್ ಸುದ್ದಿಗಾರರೊಂದಿಗೆ ಮಾತನಾಡಿ ಅದೊಂದು ನಕಲಿ ವಿಡಿಯೋ. ಶಾಸಕರ ಖರೀದಿ ಗೋಜಿಗೆ ನಾವು ಹೋಗಿಲ್ಲ. ಇದೊಂದು ಬಿಜೆಪಿಯ ಕುತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ತನಿಖಾ ಸಂಸ್ಥೆಯಾದ ಸಿಬಿಐಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ರಾವತ್ ಕಿಡಿಕಾರಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ಸಿಬಿಐ ವಿಚಾರಣೆಗೆ ಸಹಕರಿಸುತ್ತೇನೆ ಎಂದು ಉತ್ತರಾಖಂಡ ಸಿಎಂ ಹರೀಶ್ ರಾವತ್ ಹೇಳಿದ್ದಾರೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ