ದೆಹಲಿ: ದೆಹಲಿಯ ತಲ್ಕಾತೋರಾ ಮೈದಾನಲ್ಲಿ ಸಾವಿರಾರು ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪರ್ ಚರ್ಚಾ' ಎಂದು ಕರೆಯಲ್ಪಡುವ ಸಂವಾದಾತ್ಮಕ ಅಧಿವೇಶನವನ್ನು ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡಿದ್ದರು. ವಿದ್ಯಾರ್ಥಿಗಳು ಪ್ರಧಾನ ಮಂತ್ರಿಗಳೊಂದಿಗೆ ಪರೀಕ್ಷೆಯ ಕುರಿತು ಚರ್ಚೆ ನಡೆಸುವ ಕಾರ್ಯಕ್ರಮ ಇದಾಗಿತ್ತು. ಮೋದಿಯವರು ವಿದ್ಯಾರ್ಥಿಗಳಿಂದ ಪ್ರಶ್ನೆಯನ್ನು ತೆಗೆದುಕೊಳ್ಳುವ ಮೊದಲು ಅವರನ್ನು ಕುರಿತು, "ನೀವು ಪ್ರಧಾನ ಮಂತ್ರಿಯೊಂದಿಗೆ ಮಾತನಾಡುತ್ತಿಲ್ಲ, ಸ್ನೇಹಿತನೊಂದಿಗೆ ಮಾತನಾಡುತ್ತಿದ್ದೀರಿ" ಎಂದು ಹೇಳಿದರು.
ಆದರೆ ವಿದ್ಯಾರ್ಥಿಯೊಬ್ಬ ಪ್ರಧಾನಿಯ ಡಿಗ್ರಿಯ ಕುರಿತು ಪ್ರಶ್ನೆಯೊಂದನ್ನು ಕೇಳಿದಾಗ ವಿಷಯವು ನಾಟಕೀಯವಾದ ತಿರುವನ್ನು ಪಡೆದುಕೊಂಡಿತು. ಆ ವಿದ್ಯಾರ್ಥಿ ತನ್ನ ಪ್ರಶ್ನೆಯನ್ನು ಕೇಳಿ ಮುಗಿಸುವ ಮೊದಲೇ ಅವನನ್ನು ಭದ್ರತಾ ಸಿಬ್ಬಂದಿಗಳು ಅಲ್ಲಿಂದ ಹೊರಗೆ ಕರೆದುಕೊಂಡು ಹೋದರು. ಜೆಎನ್‌ಯು ನ ಪಕ್ಕದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ 12 ನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ಅಂಕಿತ್ ದೇಸಾಯಿ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕೆಲವು ಪ್ರಶ್ನೆಗಳನ್ನು ಹೊಂದಿದ್ದ ಎನ್ನಲಾಗಿದೆ. "ಮೋದಿ ಜಿ ಪ್ರಧಾನಿಯಂತಲ್ಲದೇ ಸ್ನೇಹಿತನಂತೆ ವರ್ತಿಸುವರು ಎಂದು ನಾನು ಅಂದುಕೊಂಡೆ, ಆದ್ದರಿಂದ ನಾನು ಅವರ ನಿಗೂಢ ಡಿಗ್ರಿಯ ಕುರಿತು ಕೇಳಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಕುರಿತು ಉಪನ್ಯಾಸ ನೀಡುವಾಗ ಅವರ ಕುರಿತು ಸ್ವಲ್ಪ ಪಾರದರ್ಶಕತೆಯಿರಬೇಕು" ಎಂದು ಅಂಕಿತ್ ದೇಸಾಯಿ ಮಾಧ್ಯಮದವರಿಗೆ ಹೇಳಿದ್ದಾನೆ ಎನ್ನಲಾಗಿದೆ.
ಅಂಕಿತ್ ದೇಸಾಯಿ ಪ್ರಶ್ನೆಯು ರಾಹುಲ್ ಗಾಂಧಿಯ ಕುಮ್ಮಕ್ಕಿನಿಂದ ಕೂಡಿರುವಂತಿದೆ, ಇದು ಭಾರತದ ಪ್ರಧಾನಿಯವರನ್ನು ಅವಮಾನಿಸುವಂತಿದ್ದು ಅವನ ಮೇಲೆ ದೂರನ್ನು ದಾಖಲಿಸಬೇಕು ಎಂದು ಬಿಜೆಪಿಯ ವಕ್ತಾರರು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಕಾಂಗ್ರೆಸ್ ಇದನ್ನು ತಳ್ಳಿಹಾಕುತ್ತಾ ಅಂಕಿತ್ ದೇಸಾಯಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿದ್ದು ಅವನ ಪ್ರಶ್ನೆಗಳು ಮಾನ್ಯವಾಗಿದೆ ಎಂದು ಹೇಳಿದೆ.