ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ ಮತ್ತಿತರರ ವಿರುದ್ಧಧ ಒಳ ಸಂಚು ಆರೋಪದ ಮರು ವಿಚಾರಣೆಗೆ ಸುಪ್ರೀಂಕೋರ್ಟ್ ಆದೇಶ

ಬುಧವಾರ, 19 ಏಪ್ರಿಲ್ 2017 (11:28 IST)
ಭಾರೀ ಕುತೂಹಲ ಕೆರಳಿಸಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ, ಎಂ.ಎಂ. ಜೋಶಿ, ಉಮಾಭಾರತಿ ಸೇರಿದಂತೆ ಇತರೆ ನಾಯಕರು ಮತ್ತು ಕರ ಸೇವಕರ  ಮೇಲಿನ ಒಳಸಂಚು ಆರೋಪದ ವಿಚಾರಣೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ನಾಯಕರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಆರೋಪ ಕೈಬಿಟ್ಟಿದ್ದನ್ನ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ಪುರಸ್ಕರಿಸಿದೆ.
 

ಲಖನೌ ಕೋರ್ಟ್`ನಲ್ಲಿ ವಿಚಾರಣೆಗೆ ಆದೇಶಿಸಿರುವ ಕೋರ್ಟ್, 2 ವರ್ಷಗಳಲ್ಲಿ ವಿಚಾರಣೆ ಮುಗಿಸುವಂತೆ ಸೂಚಿಸಿದೆ. ನಿತ್ಯ ವಿಚಾರಣೆ ನಡೆಸುವಂತೆ ಸೂಚಿಸಿರುವ ಸುಪ್ರೀಂಕೋರ್ಟ್, ವಿಚಾರಣೆ ಮುಗಿಯುವವರೆಗೂ ನ್ಯಾಯಾಧೀಶರನ್ನ ವರ್ಗಾವಣೆ ಮಾಡದಂತೆ  ಸೂಚಿಸಿದೆ. ರಾಜಸ್ಥಾನದ ಗವರ್ನರ್, ಉತ್ತರಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಸಹ ವಿಚಾರಣೆ ಎದುರಿಸಬೇಕಿದೆ.

ಬಿಜೆಪಿ ಮುಖಂಡರಾದ ಎಲ್.ಕೆ. ಅಡ್ವಾಣಿ, ಜೋಶಿ ಸೇರಿದಂತೆ ಮತ್ತಿತರ ನಾಯಕರು ಬಾಬ್ರಿ ಮಸೀದಿ ಸಮೀಪ ಪ್ರಚೋದನಾತ್ಮಕ ಭಾಷಣ ಮಾಡಿದ್ದರು. ಇದರಿಂದ ಪ್ರೇರಿತರಾದ ಕರ ಸೇವಕರು ಬಾಬ್ರಿ ಮಸೀದಿ ಧ್ವಂಸ ಮಾಡಿದ್ದರು ಎಂದು ಸಿಬಿಐ ವಾದಿಸಿತ್ತು. ಆದರೆ, ಅಲಹಾಬಾದ್ ಕೋರ್ಟ್ ಸಿಬಿಐ ವಾದವನ್ನ ತಳ್ಲಿಹಾಕಿತ್ತು. ಇದನ್ನ ಪ್ರಶ್ನಿಸಿ ಸುಪ್ರೀಂಕೋರ್ಟ್ ಮುಂದೆ ಮೇಲ್ಮನವಿ ಸಲ್ಲಿಸಿದ್ದ ಸಿಬಿಐ, ಅಡ್ವಾಣಿ ಸೇರಿ ಮತ್ತಿತರರು ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಚು ರೂಪಿಸಿದ್ದ ಬಗ್ಗೆ ನಮ್ಮ ಬಳಿ ಸಾಕ್ಷ್ಯವಿದೆ ಎಂದು ವಾದಿಸಿತ್ತು.

 

 

ವೆಬ್ದುನಿಯಾವನ್ನು ಓದಿ